ಕುಶಾಲನಗರ, ಫೆ. 11: ಶೀಘ್ರ ಬೆಳವಣಿಗೆ ಕಾಣುತ್ತಿರುವ ಕುಶಾಲ ನಗರ ಪಟ್ಟಣದಲ್ಲಿ ನಾಗರಿಕರು ತಮ್ಮ ಆರೋಗ್ಯ ಕಾಪಾಡಲು ಪರದಾಡ ಬೇಕಾದ ಪರಿಸ್ಥಿತಿ ಸೃಷ್ಠಿಯಾಗಿದೆ.
ಕುಶಾಲನಗರದಲ್ಲಿ ಸರಕಾರಿ ಆರೋಗ್ಯ ಸಮುದಾಯ ಕೇಂದ್ರ ವೊಂದು ಕಾರ್ಯನಿರ್ವಹಿ ಸುತ್ತಿದ್ದರೂ ಈ ಆಸ್ಪತ್ರೆಯಲ್ಲಿ ನಾಗರಿಕರಿಗೆ ಯಾವದೇ ರೀತಿಯ ವೈದ್ಯಕೀಯ ಸೌಲಭ್ಯಗಳು ದೊರಕದೆ ಹೆಚ್ಚಿನ ಚಿಕಿತ್ಸೆಗೆ ನೆರೆಯ ಆಸ್ಪತ್ರೆಗಳಿಗೆ ತೆರಳಬೇಕಾದ ದುಸ್ಥಿತಿ ಮುಂದುವ ರೆದಿದೆ. ತಿಂಗಳಿಗೆ ಸರಾಸರಿ 20 ಸಾವಿರಕ್ಕೂ ಅಧಿಕ ಹೊರರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಆದರೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಸಂಬಂಧಿಸಿದ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತಾಳಿದೆ ಎನ್ನಬಹುದು.
ಯಾವದೇ ಸಂದರ್ಭ ರೋಗಿಗಳನ್ನು ಕರೆತಂದರೂ ಸಮರ್ಪಕ ಚಿಕಿತ್ಸೆ ನೀಡುವ ಬದಲಾಗಿ ಈ ಆಸ್ಪತ್ರೆ ರೋಗಿಗಳನ್ನು ಬೇರೆಡೆಗೆ ಸಾಗ ಹಾಕುವ ಕಾಯಕದಲ್ಲಿ ತಲ್ಲೀನವಾಗಿರುವಂತೆ ಕಂಡುಬರುತ್ತಿದೆ. ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಹೆಬ್ಬಾಲೆ, ಕೂಡಿಗೆ, ಹಾರಂಗಿ, ಗುಡ್ಡೆಹೊಸೂರು ಮುಂತಾದ ಭಾಗಗಳಿಂದ ದಿನನಿತ್ಯ ನೂರಾರು ರೋಗಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದರೂ ಚಿಕಿತ್ಸೆ ಕಲ್ಪಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗುತ್ತಿದೆ ಎನ್ನುವ ದೂರುಗಳು ಸಾಮಾನ್ಯವಾಗಿದೆ.
ಒಟ್ಟು 50 ಹಾಸಿಗೆಗಳ ಸಾಮಥ್ರ್ಯವುಳ್ಳ ಈ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗುವದು ಅಪರೂಪ ಎನ್ನಬಹುದು. ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಗಾಯಗೊಂಡ ರೋಗಿಗಳನ್ನು ಇಲ್ಲಿಂದ ಬೇರೆಡೆಗೆ ಕಳುಹಿಸುವ ಮೂಲಕ ಇದೊಂದು ಪ್ರಥಮ ಚಿಕಿತ್ಸಾ ಕೇಂದ್ರ ಎನ್ನುವಂತಾಗಿದೆ. ಒಟ್ಟು 6 ವೈದ್ಯರು ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ 3 ಮಂದಿ ವೈದ್ಯರು ಕಾರ್ಯನಿರ್ವಹಿಸಬೇಕಾಗಿದೆ. ಓರ್ವ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವ ಹಿಸಬೇಕಾಗುತ್ತದೆ. ಕೇವಲ ಇಬ್ಬರು ವೈದ್ಯರು ಹಾಗೂ ಓರ್ವ ಅರ್ಯವೇದ ವೈದ್ಯೆ ದಿನವಿಡೀ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೀರ್ತಿರಾಜು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲೊಂದು ರಕ್ಷಾ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದರೂ ಅಸಮರ್ಪಕ ಕಾರ್ಯವೈಖರಿಯಿಂದ ಸಂಗ್ರಹ ವಾಗುವ ಹಣ ಕೂಡ ರೋಗಿಗಳಿಗೆ ಬಳಕೆಯಾಗುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ತಿಳಿಸಿದ್ದಾರೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ, ಆರೈಕೆ ಕಲ್ಪಿಸುವಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇವೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ದಿನನಿತ್ಯ 500 ಕ್ಕೂ ಅಧಿಕ ಹೊರ ರೋಗಿಗಳು, 50 ಕ್ಕೂ ಅಧಿಕ ಒಳ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು ಹೆಚ್ಚಿನ ವೈದ್ಯರ ನಿಯೋಜನೆ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಲವೊಂದು ಸಂದರ್ಭ ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ನಿಯೋಜಿಸುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.
ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ್ಯೆ ಅಪಘಾತಗಳು ನಡೆಯುತ್ತಿದ್ದು ಈ ಸಂದರ್ಭ ತುರ್ತು ಚಿಕಿತ್ಸೆಗಾಗಿ ದಾಖಲಾಗುವ ಗಾಯಾಳುಗಳಿಗೆ ಚಿಕಿತ್ಸೆ ಕಲ್ಪಿಸುವಲ್ಲಿ ಈ ಆಸ್ಪತ್ರೆ ಸಂಪೂರ್ಣ ವೈಫಲ್ಯ ಕಾಣುತ್ತಿದೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸುತಿದ್ದಾರೆ. ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸು ತ್ತಿದ್ದರೂ ಅದು ರೋಗಿಗಳಿಗೆ ಅವಶ್ಯಕತೆಯಿದ್ದ ಸಂದರ್ಭ ಲಭ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿರುವ ಸೌಲಭ್ಯಗಳು ಕೇವಲ ದಾಖಲೆಗಳಿಗಷ್ಟೆ ಸೀಮಿತವಾಗಿದೆ ಎನ್ನುತ್ತಾರೆ ಸ್ಥಳೀಯರು.
ಆಸ್ಪತ್ರೆಯಲ್ಲಿ ಅಳವಡಿಸ ಲಾಗಿರುವ ಪರೀಕ್ಷಾಲಯ ಕೇಂದ್ರಗಳಲ್ಲಿ ರಕ್ತ ಮುಂತಾದ ರೋಗಗಳ ಪರೀಕ್ಷೆ ನಡೆಸಲು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಹಿಸುತ್ತಿರುವ ಬಗ್ಗೆ ಹಲವು ರೋಗಿಗಳು ‘ಶಕ್ತಿ’ ಪ್ರತಿನಿಧಿ ಯೊಂದಿಗೆ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಬಡ ಜನರು ಹೆಚ್ಚಿನ ಹಣ ಪಾವತಿಸುವದು ಕಷ್ಟಕರವಾಗಿದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹೆಣಗಾಡು ವಂತಾಗಿದೆ ಎನ್ನುತ್ತಾರೆ. ಸಂಜೆ ವೇಳೆ ವೈದ್ಯರುಗಳ ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿರುವ ದೃಶ್ಯ ಕುಶಾಲನಗರ ಪಟ್ಟಣದಲ್ಲಿ ದಿನನಿತ್ಯ ಕಾಣಬಹುದು. ನಾಗರಿಕರಿಗೆ ಸೂಕ್ತ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕೋಟಿ ಗಟ್ಟಲೆ ಅನುದಾನ ಕಲ್ಪಿಸಿದ್ದರೂ ಕುಶಾಲನಗರ ಸರಕಾರಿ ಆಸ್ಪತ್ರೆ ಮಾತ್ರ ಕಳೆದ ಕೆಲವು ವರ್ಷಗಳಿಂದ ಹಿಂದೆ ಬಿದ್ದಿದೆ.
ಕೂಡಲೇ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಯಕಲ್ಪ ನೀಡು ವಲ್ಲಿ ಚಿಂತನೆ ಹರಿಸಬೇಕಾಗಿದೆ.
- ವನಿತಾ ಚಂದ್ರಮೋಹನ್