ಮಡಿಕೇರಿ, ಫೆ. 11: ಹತ್ತು ದಿನಗಳ ಹಿಂದೆ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡುವಿನ ಗುಡ್ಡಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಮೂವರು ಶಸ್ತ್ರಧಾರಿ ನಕ್ಸಲರು ಕೇರಳದ ವಯನಾಡುವಿನತ್ತ ನುಸುಳಿರುವ ಶಂಕೆ ವ್ಯಕ್ತಗೊಂಡಿದೆ.ತಾ. 2 ರಂದು ಗುಡ್ಡಗದ್ದೆ ನಿವಾಸಿ ಕುಡಿಯರ ಶಂಕಪ್ಪ ಅವರ ಮನೆಯಲ್ಲಿ ಸಂಜೆಗತ್ತಲೆ ನಡುವೆ ಕಾಣಿಸಿಕೊಂಡು ದಿನಸಿ ಸಂಗ್ರಹಿಸಿದಲ್ಲದೆ ಮನೆಮಂದಿಗೆ ಮಾಡಿದ್ದ ಅಡುಗೆ ಊಟ ಮಾಡಿದ್ದ ಮೂವರು ತಲೆಮರೆಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಆ ಬೆನ್ನಲ್ಲೇ ಸುತ್ತ ಮುತ್ತಲಿನ ಅರಣ್ಯವನ್ನು ಸುತ್ತುವರಿದ ಕೊಡಗು ಮತ್ತು ಹೆಗ್ಗಡದೇವನ ಕೋಟೆಯ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸ್ ಪಡೆ ವ್ಯಾಪಕ ಶೋಧ ನಡೆಸಿತ್ತು. ಈ ಕಾರ್ಯಾಚರಣೆಯ ಅಪಾಯ ಅರಿತಿರುವ ನಕ್ಸಲರು ಬೇರೆಯವರ ಸಹಾಯದಿಂದ ಕಳ್ಳ ಮಾರ್ಗದೊಂದಿಗೆ, ದಕ್ಷಿಣ ಕೊಡಗಿನ ಬಿರುನಾಣಿ ಮಾರ್ಗವಾಗಿ ವಯನಾಡು ತಲಪಿರುವ ಸಂಶಯ ಹುಟ್ಟಿಕೊಂಡಿದೆ.ಅಲ್ಲದೆ ವಿಶ್ವಾಸನೀಯ ಮೂಲಗಳ ಪ್ರಕಾರ ಕೊಯನಾಡುವಿನಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು, ಮೂರ್ನಾಲ್ಕು ದಿನಗಳು ಬೇರೆ ಬೇರೆ ಮಾರ್ಗದಲ್ಲಿ ತಲೆ ಮರೆಸಿಕೊಂಡು ತನಿಖೆಯ ದಿಕ್ಕು ಬದಲಾಯಿಸಿ ವಯನಾಡುವಿನತ್ತ ನುಸುಳಿರುವ ಸುಳಿವಿನೊಂದಿಗೆ, ಆ ಭಾಗದಲ್ಲಿ ಕೋಂಬಿಂಗ್ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.