ಮಡಿಕೇರಿ, ಫೆ. 12: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಎ.ವಿ. ಶಾಲೆಯಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರ ರನ್ನುದ್ದೇಶಿಸಿ ಮಾತನಾಡಿದ ಸಮಿತಿ ಪ್ರಮುಖರಾದ ಡಿ.ಹೆಚ್. ನಿರ್ವಾಣಪ್ಪ, ಅಮೀನ್ ಮೊಹಿಸಿನ್, ಹೆಚ್.ಕೆ. ಮೊಣ್ಣಪ್ಪ, ಹ್ಯಾರಿಸ್ ಅವರುಗಳು ಜಿಲ್ಲೆಯಲ್ಲಿ ಸಹಸ್ರಾರು ಮಂದಿ ನಿವೇಶನ ರಹಿತರಿದ್ದರೂ, ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ನಿವೇಶನ ಒದಗಿಸಲು ಯಾವದೇ ಸೂಕ್ತ ಕ್ರಮಕೈಗೊಂಡಿಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾಗಲೀ, ಸರಕಾರವಾಗಲೀ, ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮಡಿಕೇರಿ ನಗರದಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲ್ಪಟ್ಟಿರುವ ವಾರ್ಡ್ಗಳಲ್ಲಿ ಸಾಕಷ್ಟು ಮಂದಿ ನಿವೇಶನ ರಹಿತರಿದ್ದು, ಅಂತವರುಗಳನ್ನು ಗುರುತಿಸಿ ನಿವೇಶನ ಒದಗಿಸಿಕೊಡಬೇಕೆಂದು ಒತ್ತಾಯಿಸಿ ದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.