ಗೋಣಿಕೊಪ್ಪಲು, ಫೆ.12 : ಮಾಯಮುಡಿ ಸಮೀಪದ ಧನುಗಾಲ ಗ್ರಾಮದಲ್ಲಿ ಹುಲಿ ಧಾಳಿಗೆ ಮೂರು ಜಾನುವಾರುಗಳು ಮೃತಪಟ್ಟಿದೆ. ಧನುಗಾಲ ನಿವಾಸಿ ಮುರುಡೇಶ್ವರ್ ಅವರಿಗೆ ಸೇರಿದ ಹಸುಗಳನ್ನು ಮೇಯಲು ಮನೆಯ ಸಮೀಪವಿರುವ ಗದ್ದೆಗೆ ನಿನ್ನೆ ಬಿಟ್ಟಿದ್ದರು. ಸಂಜೆಯ ವೇಳೆಯಲ್ಲಿ ಹಾಲು ಕರೆಯಲು ಹಸುಗಳ ಹುಡುಕಾಟ ನಡೆಸಿದಾಗ ಗದ್ದೆಯಲ್ಲಿ 3 ಹಸುಗಳು ಮೃತಪಟ್ಟಿರುವದು ಕಂಡು ಬಂದಿದೆ.ಹಸುಗಳನ್ನು ಕಳೆದುಕೊಂಡ ರೈತ ಮುರುಡೇಶ್ವರ ಹಸುಗಳಿಂದ ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಗದ್ದೆಯಲ್ಲಿ ಆನೆ ಹಾವಳಿಯಿಂದ ಗದ್ದೆ ಮಾಡುವದನ್ನು ನಿಲ್ಲಿಸಿದ್ದರು. ಹೈನುಗಾರಿಕೆಯಲ್ಲಿ ಮುಂದುವರೆಯಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ 2.50 ಲಕ್ಷ ಸಾಲ ಪಡೆದಿದ್ದು ಪ್ರತಿವಾರ 2,600 ರೂಪಾಯಿಗಳನ್ನು ಸಾಲ ಕಟ್ಟುತ್ತಿದ್ದರು. ಹಸುವನ್ನು ಕಳೆದುಕೊಂಡ ಇವರಿಗೆ ಇದೀಗ ಜೀವನೋಪಾಯ ಕಷ್ಟವಾಗಿದೆ.

ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ

(ಮೊದಲ ಪುಟದಿಂದ) ಮುಖಂಡರುಗಳಾದ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್, ತೀತಿರಮಾಡ ಜಗದೀಶ್ ಹಾಗೂ ತೀತಿರಮಾಡ ರಾಜ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳಾದ ಡಿಎಫ್‍ಓ ಮರಿಯ ಕ್ರಿಸ್ತರಾಜ್, ಎಸಿಎಫ್ ಶ್ರೀಪತಿ ಹಾಗೂ ಆರ್‍ಎಫ್‍ಓ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ರೈತ ಸಂಕಷ್ಟದಲ್ಲಿದ್ದು, ತಾವು ನೀಡುವ 10 ಸಾವಿರ ರೂ. ಪರಿಹಾರ ಸಾಕಾಗುವದಿಲ್ಲ ತಲಾ 1 ಲಕ್ಷದಂತೆ 3 ಹಸುಗಳಿಗೆ 3 ಲಕ್ಷ ಪರಿಹಾರ ತಕ್ಷಣ ನೀಡುವಂತೆ ಪಟ್ಟುಹಿಡಿದರು.

ಅರಣ್ಯ ಅಧಿಕಾರಿ ಶ್ರೀಪತಿ ರೈತರ ಪ್ರಶ್ನೆಗಳಿಗೆ ಉತ್ತರಿಸಿ ತಕ್ಷಣ ತಲಾ 10 ಸಾವಿರ ಪರಿಹಾರವನ್ನು ನೀಡುತ್ತೇವೆ ನಂತರ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಪರಿಹಾರದ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇವರ ಮಾತಿಗೆ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ದಿಗ್ಬಂಧನ ಮಾಡುತ್ತೇವೆ ಪೂರ್ಣ ಪರಿಹಾರ ಸಿಕ್ಕಿದ ನಂತರ ತಮ್ಮನ್ನು ಬಂಧಮುಕ್ತಗೊಳಿಸುವದಾಗಿ ತಿಳಿಸಿದರು. ಬಳಿಕ ಅರಣ್ಯ ಅಧಿಕಾರಿಗಳು 30 ಸಾವಿರ ರೂ. ಪರಿಹಾರ ನೀಡಿದರು.ತಮ್ಮ ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ನಡೆದ ಘಟನೆಯ ಬಗ್ಗೆ ಅರಣ್ಯ ಹಿರಿಯ ಅಧಿಕಾರಿಗಳು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ನಂತರ ಹುಲಿಯನ್ನು ಹಿಡಿಯಲು ಬೋನನ್ನು ಸ್ಥಳಕ್ಕೆ ತರುವದರ ಮೂಲಕ ರಾತ್ರಿ ಹುಲಿಯನ್ನು ಹಿಡಿಯುವದಾಗಿ ಭರವಸೆ ನೀಡಿದರು. ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ ಭವಾನಿ, ಸದಸ್ಯರುಗಳಾದ ಕೆ.ಟಿ ಬಿದ್ದಪ್ಪ, ಸ್ಥಳೀಯ ಮುಖಂಡರುಗಳಾದ ಎಸ್.ಎಸ್ ಸುರೇಶ್, ಬಸವಣ್ಣ, ರಾಯ್, ವೃತ್ತ ನಿರೀಕ್ಷಕ ದಿವಾಕರ್ ಸ್ಥಳದಲ್ಲಿದ್ದರು.