ಮಡಿಕೇರಿ, ಫೆ. 11: ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 13 ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಮತ್ತು ವಿವಿಧ ಪೂಜಾಧಿಗಳು ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ರುದ್ರ ಹೋಮ, ವೇದಮೂರ್ತಿ ಶ್ರೀಪತಿ ಭಟ್ ನೇತೃತ್ವದಲ್ಲಿ ನಡೆಯಲಿದ್ದು, ರುದ್ರ ಹೋಮದ ಪೂರ್ಣಾಹುತಿ ಮಧ್ಯಾಹ್ನ 12.30 ಗಂಟೆಗೆ ನೆರವೇರಲಿದೆ. ಬಳಿಕ ಮಹಾಮಂಗಳಾರತಿ ನಡೆಯಲಿದೆ.

ಸಂಜೆ 7 ಗಂಟೆಯಿಂದ ಶತರುದ್ರಾಭಿಷೇಕ ಹೋಮ, ಕೊಡಗು ಹವ್ಯಕ ವಲಯದಿಂದ ರುದ್ರ ಪಾರಯಣ ನಡೆಯಲಿದೆ. ರಾತ್ರಿ 8 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಅಂದು ರಾತ್ರಿಯಿಂದ ಮರುದಿನ ಬೆಳಿಗ್ಗೆಯವರೆಗೆ ದೇವಾಲಯ ತೆರೆದಿದ್ದು, ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ತಾ. 13 ರಂದು ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ. ಅಲ್ಲದೆ ವಾದ್ಯಗೋಷ್ಠಿಯೊಂದಿಗೆ ಸಂಜೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಖ್ಯಾತೆ ಗ್ರಾಮದ ಗ್ರಾಮಸ್ಥರು ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾ. 13 ರಂದು ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ.