ಮಡಿಕೇರಿ, ಫೆ. 11: ಆಯುರ್ವೇದ ಹಾಗೂ ಯುನಾನಿ ವೈದ್ಯ ವಿಜ್ಞಾನಕ್ಕೆ ವೈದ್ಯ ಹಕೀಂ ಅಜ್ಮಲ್ ಖಾನ್ ಕೊಡುಗೆ ಮಹತ್ತರವಾದದು ಎಂದು ಮಂಗಳೂರು ಜಿಲ್ಲಾ ಆಯುಷ್ ಇಲಾಖೆಯ ಯುನಾನಿ ತಜ್ಞವೈದ್ಯ ಡಾ.ಮಹಮ್ಮದ್ ನೂರುಲ್ಲಾ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಕೊಡಗು ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಯುನಾನಿ ವೈದ್ಯ ಪದ್ಧತಿಯ ಹೆಸರಾಂತ ವೈದ್ಯರಾದ ಹಕೀಂ ಅಜ್ಮಲ್ ಖಾನ್ ಅವರ 150 ನೇ ಜನ್ಮ ದಿನದ ಪ್ರಯುಕ್ತ ಯುನಾನಿ ದಿನಾಚರಣೆ, ಉಚಿತ ಯುನಾನಿ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಜ್ಮಲ್ ಖಾನ್ ಪ್ರಸಿದ್ಧ ಮನೆತನದಲ್ಲಿ ಜನಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದವರು. ಕೇವಲ ವೈದ್ಯರಾಗಿ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹಿಂದು ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ, ಉಜ್ವಲ ರಾಷ್ಟ್ರಭಕ್ತರಾಗಿಯೂ ನಾಡಿನ ಸೇವೆ ಮಾಡಿದವರಲ್ಲಿ ಹಕೀಂ ಪ್ರಮುಖರು ಎಂದು ಸ್ಮರಿಸಿಕೊಂಡರು.
ವೈದ್ಯ ವೃತ್ತಿಯೊಂದಿಗೆ ರಾಜಕೀಯ ದಲ್ಲೂ ಗುರುತಿಸಿಕೊಂಡಿದ್ದ ಇವರು ಕಾಂಗ್ರೆಸ್ನಲ್ಲಿ ಕಾರ್ಯ ನಿರ್ವಹಿಸಿ ದ್ದರು. ಗಾಂಧೀಜಿ ಯವರೊಂದಿಗೆ ಗೆಳೆತನ ಹೊಂದಿದ್ದ ಇವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿಯೊಂದಿಗೆ ಸಕ್ರಿಯವಾಗಿದ್ದು ಕೊಂಡು ದೇಶಸೇವೆಯನ್ನು ಸಲ್ಲಿಸಿದ್ದರು.
ಹಲವು ವರ್ಷಗಳ ಹಿಂದೆ ಆಯುರ್ವೇದ ಅಸ್ತಿತ್ವದಲ್ಲಿ ಇತ್ತಾದರೂ ಬ್ರಿಟಿಷ್ ಪದ್ಧತಿಗಳು ಆರಂಭವಾದ ನಂತರದಲ್ಲಿ ಆಯುರ್ವೇದಕ್ಕೆ ಇದ್ದ ಜನಪ್ರಿಯತೆ ಕೊಂಚ ಮಟ್ಟಿಗೆ ಕಡಿಮೆಯಾಯಿತು. ಆದರೆ ಈ ಸಂದರ್ಭ ಯುನಾನಿ ವೈದ್ಯ ಪದ್ಧತಿ ಬಗ್ಗೆ ಹಕೀಂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಪ್ರಯತ್ನಿಸಿದರು. ಇಂದು ಯುನಾನಿ ಹಾಗೂ ಆಯಷ್ ಪದ್ಧತಿ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯತೆ ಇದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರರಾವ್ ಮಾತನಾಡಿ, ಪಾರಂಪರಿಕ ವೈದ್ಯ ಪದ್ಧತಿ ಕಡೆಗಣನೆಯಾದ ಸಂದರ್ಭದಲ್ಲಿ ಹಕೀಂ ಈ ವೈದ್ಯ ಪದ್ಧತಿ ಉನ್ನತಿಗೆ ಶ್ರಮಿಸಿದವರು. ಆರ್ಯುವೇದ ಔಷಧಿ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದ್ದು, ಎಲ್ಲರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು. ಡಾ.ಅರುಣ್, ಡಾ.ಶೈಲಜ, ಡಾ.ಶುಭ ಮತ್ತಿತರರು ಈ ಸಂದರ್ಭ ಹಾಜರಿದ್ದರು.