ಮಡಿಕೇರಿ, ಫೆ. 11: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಂಬಂಧ ಅರಿವು ಮೂಡಿಸುವ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಚಾಲನೆ ನೀಡಿದರು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು.

ಮಕ್ಕಳನ್ನು ಯಾವದೇ ಕಾರಣಕ್ಕೂ ದುಡಿಮೆಗೆ ಕಳುಹಿಸಬಾರದು, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಿ ಶಾಲೆಯಲ್ಲಿ ಆಟ ಪಾಠಗಳಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿ, ಮಕ್ಕಳನ್ನು ದುಡಿಮೆಗೆ ಕಳುಹಿಸಿದ್ದಲ್ಲಿ ರೂ. 20 ಸಾವಿರದಿಂದ ರೂ. 50 ಸಾವಿರದ ವರೆಗೆ ದಂಡ ಹಾಗೂ ಒಂದು ವರ್ಷದಿಂದ ಮೂರು ವರ್ಷದವರೆಗೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.

ತಾ. 16 ರಂದು ಮಡಿಕೇರಿ, ಮಕ್ಕಂದೂರು, ತಾ. 17 ರಂದು 2ನೇ ಮೊಣ್ಣಂಗೇರಿ, ಕಾಂತೂರು-ಮೂರ್ನಾಡು, ಪಾಲೆಮಾಡುಗಳಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನಾಥ್ ಇತರರು ಇದ್ದರು. ಕಲಾವಿದ ರಾಜು ಮತ್ತು ತಂಡದವರು ಬಾಲ ಕಾರ್ಮಿಕ ಪದ್ಧತಿ ನಿರ್ಮಾಲನೆ ಬಗ್ಗೆ ಜಾಗೃತಿ ಗೀತೆ ಹಾಡಿ ಗಮನ ಸೆಳೆದರು.