ಮಡಿಕೇರಿ, ಫೆ. 10: ಮಡಿಕೇರಿ ನಗರಸಭೆಯ ಕಾರ್ಯವೈಖರಿ ವಿರುದ್ಧ ಅಸಮಾಧಾನದೊಂದಿಗೆ, ನಗರ ನೈರ್ಮಲ್ಯ, ಅನಧಿಕೃತ ಕಟ್ಟಡಗಳಿಗೆ ಕುಮ್ಮಕ್ಕು, ನೌಕರರ ಕೊರತೆ ಇತ್ಯಾದಿ ಬಗ್ಗೆ ವಿಪಕ್ಷ ಬಿ.ಜೆ.ಪಿ. ಕಳೆದ 24 ಗಂಟೆಗಳ ಆಹೋರಾತ್ರಿ ಧರಣಿ ನಡೆಸಿತು. ಇಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಖಂಡಿಸಿ ಹೋರಾಟವನ್ನು ಬೆಂಬಲಿಸಿದರು.

ಜಿಲ್ಲಾಡಳಿತದ ಪರವಾಗಿ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸುವದರೊಂದಿಗೆ, ಪ್ರತಿಭಟನಾಕಾರರ ಬೇಡಿಕೆಯನ್ನು ಜಿಲ್ಲಾಡಳಿತದ ಮುಖಾಂತರ ಸರಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದ ಮೇರೆಗೆ ಬಿ.ಜೆ.ಪಿ. ಮುಷ್ಕರದಿಂದ ಹಿಂದೆ ಸರಿಯಿತು.

ಮಡಿಕೇರಿ ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಭವಾಗುತ್ತಿದ್ದು, ನಗರದ ಶುಚಿತ್ವದ ಕೊರತೆ, ಅನಧಿಕೃತ ಕಟ್ಟಡಗಳಿಗೆ ಬೆಂಬಲ, ನೌಕರರ ಕೊರತೆ, ಉಸ್ತುವಾರಿ ಸಚಿವರಿಂದ ನಗರದ ಅಭಿವೃದ್ಧಿಯ ಕಡೆಗಣನೆ ಹಾಗೂ ಆಡಳಿತ ವೈಫಲ್ಯವನ್ನು ವಿರೋಧಿಸಿ, ನಗರ ಬಿ.ಜೆ.ಪಿ.ಯಿಂದ ನಿನ್ನೆ ಬೆಳಿಗ್ಗೆ 10.30 ಗಂಟೆಯಿಂದ ಇಂದು ಬೆಳಿಗ್ಗೆ 10.30 ಗಂಟೆಯವರೆಗೆ ಆಹೋರಾತ್ರಿ ಧರಣಿಯನ್ನು ನಡೆಸಲಾಗಿತ್ತು.

ನಗರಸಭೆಯ ಆಡಳಿತದಲ್ಲಿ ಪ್ರಮುಖ ಪಾತ್ರವಹಿಸಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದ್ದರೂ ಯಾವದೇ ಸಮಸ್ಯೆಗಳಿಗೆ ಪರಿಹರ ದೊರಕುತ್ತಿಲ್ಲ. ಫಾರಂ ನಂ. 3 ನೀಡಲು ವಿಳಂಬ, ಯು.ಜಿ.ಡಿ. ಕಾಮಗಾರಿಗಳ ಅವ್ಯವಸ್ಥೆ, ನಗರಸಭೆಯಲ್ಲಿ ನೌಕರರ ಕೊರತೆ, ಸುಬ್ರಮಣ್ಯ ನಗರ ಹಾಗೂ ಸ್ಟೋನ್‍ಹಿಲ್ ವ್ಯಾಪ್ತಿಯನ್ನು ಕಸದ ಆಗರವನ್ನಾಗಿ ಮಾಡುತ್ತಿರುವ ನಗರಸಭೆಯಿಂದ ಅನಧಿಕೃತ ಕಟ್ಟಡಗಳಿಗೆ ಬೆಂಬಲ, ವಾಸ ದೃಢೀಕರಣ ಮತ್ತು ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ, ಮನೆ ಮತ್ತು ಕಟ್ಟಡಗಳ ಮುಕ್ತಾಯ ಪ್ರಮಾಣ ಪತ್ರ ನೀಡುವಲ್ಲಿ ಅನಾವಶ್ಯಕ ತೊಂದರೆ, ಪ್ರವಾಸಿಗರಿಂದ ನಾಗರಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸುವಲ್ಲಿ ನಗರಸಭೆ ವಿಫಲಗೊಂಡಿದ್ದಾಗಿ ಧರಣಿ ನಿರತರು ಆರೋಪಿಸಿದರು.

ಗಾಂಧಿ ಮೈದಾನದ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ವಿಫಲ, ಆಡಳಿತ ಪಕ್ಷದ ಒಳಜಗಳದಿಂದ ಸಾರ್ವಜನಿಕ ಕೆಲಸಗಳು ವಿಳಂಬ, ಮಹದೇವಪೇಟೆ ರಸ್ತೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ವಿಳಂಬ ನೀತಿ, ನಗರಸಭೆಯಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಗರಣದ ಬಗ್ಗೆ ದಿವ್ಯ ನಿರ್ಲಕ್ಷ್ಯ, ರಾಜಸೀಟು ಉದ್ಯಾನವನದಲ್ಲಿ ಸಂಗೀತ ಕಾರಂಜಿಯ ಅವ್ಯವಸ್ಥೆ, ತೆರಿಗೆ ವಸೂಲಾತಿಯಲ್ಲಿ ವಿಳಂಬ ನೀತಿ ಇತ್ಯಾದಿ ಅವ್ಯವಸ್ಥೆಗಳನ್ನು ವಿರೋಧಿಸಿ ಆಹೋರಾತ್ರಿ ಧರಣಿ ನಡೆಸಲಾಗಿತ್ತು.

ಧರಣಿಯಲ್ಲಿ ನಗರಸಭಾ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಅನಿತಾ ಪೂವಯ್ಯ, ಕೆ.ಎಸ್. ರಮೇಶ್, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸವಿತಾ ರಾಕೇಶ್, ಶಿವಕುಮಾರಿ, ಲಕ್ಷ್ಮಿ, ಬಿ.ಕೆ. ಅರುಣ್, ಕಾಳನ ರವಿ, ಜಗದೀಶ್ ಕುಮಾರ್, ಅರುಣ್ ಶೆಟ್ಟಿ, ಮನು ಮಂಜುನಾಥ್, ಬಿ.ಎಸ್. ಪ್ರಶಾಂತ್, ಕೀರ್ತನ್, ಡಿಶು, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ ಮೊದಲಾದವರು ಪಾಲ್ಗೊಂಡಿದ್ದರು.