ಮಡಿಕೇರಿ, ಫೆ. 10 : ನಗರಸಭೆಯ ಮೂಲಕ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ ಮಂದಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷುಲ್ಲಕ ರಾಜಕಾರಣ ಪ್ರದರ್ಶಿಸುವದಕ್ಕಾಗಿ ಅಹೋರಾತ್ರಿ ಧರಣಿ ಎನ್ನುವ ನಾಟಕವಾಡಿದ್ದಾರೆ ಎಂದು ಆರೋಪಿಸಿರುವ ನಗರಸಭೆಯ ಕಾಂಗ್ರೆಸ್ ಸದಸ್ಯರು ನಗರದ ಜನತೆಯನ್ನು ಅಷ್ಟು ಸುಲಭವಾಗಿ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಸದಸ್ಯರುಗಳಾದ ಹೆಚ್.ಎಂ. ನಂದಕುಮಾರ್, ಚುಮ್ಮಿದೇವಯ್ಯ, ಪ್ರಕಾಶ್ ಆಚಾರ್ಯ, ತಜಸುಂ ಹಾಗೂ ಜುಲೇಕಾಬಿ ಬಿಜೆಪಿ ವರ್ತನೆಯನ್ನು ಖಂಡಿಸುವದಾಗಿ ತಿಳಿಸಿದ್ದಾರೆ.

ನಗರದಲ್ಲಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಕಾನೂನಿನ ಚೌಕಟ್ಟಿನಡಿ ಈಗಾಗಲೇ ಸಾಮಾನ್ಯ ಸಭೆ ನಿರ್ಣಯಗಳನ್ನು ಕೈಗೊಂಡಿದೆ. ತೆರವು ಕಾರ್ಯಾಚರಣೆ ನಡೆಸಲು ನಗರಸಭೆಯ ಪೌರಾಯುಕ್ತರಿಗೆ ಆಡಳಿತಾತ್ಮಕವಾಗಿ ಸಂಪೂರ್ಣ ಅಧಿಕಾರವಿದ್ದು, ಈ ಬಗ್ಗೆ ಪೌರಾಯುಕ್ತರೇ ಗಮನ ಹರಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಕಟ್ಟಡದ ನೆಪವೊಡ್ಡಿ ಬಿಜೆಪಿ ಮಂದಿ ಧರಣಿ ನಡೆಸಿದ್ದು, ನಗರಸಭೆಯ ಕೆಲವು ಬಿಜೆಪಿ ಸದಸ್ಯರೇ ಯಾವದೇ ಅನುಮತಿ ಇಲ್ಲದೆ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪೌರಾಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನಗರಸಭೆ ಮೂಲಕ ನಗರದ ಅಭಿವೃದ್ಧಿಗೆ ರಾಜ್ಯ ಸರಕಾರ ಸಾಕಷ್ಟು ಅನುದಾನವನ್ನು ನೀಡಿ ಸಹಕರಿಸಿದೆ. ನೂತನ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ, ಹೈಟೆಕ್ ಮಾರುಕಟ್ಟೆ ನಿರ್ಮಾಣ, ನಗರದ ರಸ್ತೆಗಳ ದುರಸ್ತಿ ಕಾರ್ಯವನ್ನು ಸಹಿಸದ ಮಂದಿ ವಿನಾಕಾರಣ ಆಡಳಿತ ವ್ಯವಸ್ಥೆ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

ಮಾರುಕಟ್ಟೆ ಮತ್ತು ಖಾಸಗಿ ಬಸ್ ನಿಲ್ದಾಣ ಕಾಮಗಾರಿ ವಿಳಂಬವಾಗಲು ಮಡಿಕೇರಿ ಕ್ಷೇತ್ರದ ಶಾಸಕರ ಅಸಹಕಾರ ಕಾರಣ. ದಕ್ಷ ಆಡಳಿತ ನೀಡುತ್ತಿರುವ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆನ್ನುವ ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್ಸಿನಿಂದ ಹೊರ ಹೋದ ಇಬ್ಬರು ಸದಸ್ಯರು ಇವರೊಂದಿಗೆ ಸೇರಿಕೊಂಡಿದ್ದಾರೆ ಎಂದು ಗೋಷ್ಠಿಯಲ್ಲಿ ಆರೋಪಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ನಗರಸಭೆಯ ಕುರಿತು ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ. ಜನರ ಹಾದಿ ತಪ್ಪಿಸುವ ಯತ್ನ ಮಾಡಿದರೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಕಾಂಗ್ರೆಸ್‍ಗೂ ತಿಳಿದಿದೆ ಎಂದು ಹೆಚ್.ಎಂ. ನಂದಕುಮಾರ್ ತಿರುಗೇಟು ನೀಡಿದ್ದಾರೆ.

ಹಿಂದಿನ ನಗರಸಭೆಯ ಆಡಳಿತದಲ್ಲಿ ಬಿಜೆಪಿಯ ನಾಲ್ವರು ಸದಸ್ಯರ ಕೂಟ ಯಾವ ರೀತಿ ಕಾರ್ಯ ನಿರ್ವಹಿಸುತ್ತಿತ್ತು ಎನ್ನುವದು ಇಡೀ ನಗರದ ಜನತೆಗೆ ತಿಳಿದಿದೆ. ಅದೇ ಕೂಟ ಇಂದಿನ ನಗರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಗಳಿಸಿರುವುದಲ್ಲದೆ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿದೆ. ಮೊದಲು ಈ ನಾಲ್ವರು ನೈತಿಕ ಹೊಣೆ ಹೊತ್ತು ತಮ್ಮ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ನಂದಕುಮಾರ್ ಒತ್ತಾಯಿಸಿದ್ದಾರೆ.

ನಗರಸಭೆ ದೃಢೀಕರಣ ಪತ್ರ ನೀಡಲು ವಿಳಂಬ ಧೋರಣೆ ತೋರುತ್ತಿದೆ ಎನ್ನುವ ಆರೋಪವಿದೆ. ಇದಕ್ಕೆ ಈ ನಾಲ್ವರ ಕೂಟ ನೇರ ಕಾರಣ. ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಪರ ಚರ್ಚೆಯಲ್ಲಿ ಭಾಗವಹಿಸದೆ ಕೇವಲ ವೈಯಕ್ತಿಕ ನಿಂದನೆ ಹಾಗೂ ತೇಜೋವಧೆಯಲ್ಲೇ ಕಾಲಹರಣ ಮಾಡುತ್ತಿರುವದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಸಿಬ್ಬಂದಿ ಕೊರತೆ ಇರುವುದು ನಿಜವಾದರೂ ಇರುವ ಸಿಬ್ಬಂದಿಗಳಿಗೆ ನಾವು ಹೇಳಿದಂತೆ ಕೇಳಬೇಕೆಂದು ಬಿಜೆಪಿಯ ಕೆಲವು ಸದಸ್ಯರು ತೊಂದರೆ ನೀಡುತ್ತಿದ್ದಾರೆ. ಈ ಬೆಳವಣಿಗೆಗೆ ಪೌರಾಯುಕ್ತರ ಬೆಂಬಲವೂ ಇದೆ ಎನ್ನುವ ಸಂಶಯವಿದೆ. ಕೆಲವು ಅಧಿಕಾರಿಗಳು ಬೇಸರಗೊಂಡು ವರ್ಗಾವಣೆಯನ್ನು ಪಡೆದುಕೊಂಡಿದ್ದಾರೆ. ಖಾಲಿಯಾದ ಹುದ್ದೆಯನ್ನು ಭರ್ತಿ ಮಾಡುವುದಕ್ಕೂ ಅವಕಾಶ ನೀಡದೆ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಹೆಚ್.ಎಂ. ನಂದಕುಮಾರ್ ಸೇರಿದಂತೆ ಐವರು ಸದಸ್ಯರು ಆರೋಪಿಸಿದ್ದಾರೆ.