ಮಡಿಕೇರಿ, ಫೆ. 10: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿ ವೇದಿಕೆ ಹಾಗೂ ಜೆ.ಡಿ.ಎಸ್. ಗುಂಪೊಂದು ಇಂದು ಪಕ್ಷದ ಪ್ರಮುಖರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿತು.

ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾ ಉಸ್ತುವಾರಿ ಮನೋಜ್ ಬೋಪಯ್ಯ ಅವರು, ಜನತಾದಳ ಸಂಘಟನೆಗಾಗಿ ಈ ಕಾರ್ಯಕ್ರಮ ರೂಪಿಸಿರುವದಾಗಿ ಸ್ಪಷ್ಟಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಮಡಿಕೇರಿ ಕ್ಷೇತ್ರದಿಂದ ಬಿ.ಎ. ಜೀವಿಜಯ ಅವರನ್ನು ಗೆಲ್ಲಿಸುವದರೊಂದಿಗೆ, ರಾಷ್ಟ್ರೀಯ ಪಕ್ಷಗಳಾದ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಆಡಳಿತ ವೈಫಲ್ಯ ವಿರುದ್ಧ ಜಾಗೃತಿಗಾಗಿ ಮನೆ ಮನೆ ತೆರಳಿ ಪ್ರಚಾರ ನಡೆಸಲಾಗುವದು ಎಂದರು.

ಅಲ್ಲದೆ, ತಮ್ಮ ಮುಂದಾಳತ್ವದಲ್ಲಿ ಕುಮಾರಸ್ವಾಮಿ ಅಭಿಮಾನಿ ವೇದಿಕೆ ಮೂಲಕ ಯುವಕರು ಜೆ.ಡಿ.ಎಸ್. ಸೇರುತ್ತಿದ್ದು, ಇಂದು ಕೂಡ ಅನೇಕರು ಸೇರ್ಪಡೆಗೊಳ್ಳಲು ವೇದಿಕೆ ರೂಪಿಸಿರುವದಾಗಿ ಸಮರ್ಥಿಸಿ ಕೊಂಡರು. ತಾನು ಖುದ್ದಾಗಿ ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರನ್ನು ದೂರವಾಣಿಯಲ್ಲಿ ಆಹ್ವಾನಿಸಿದ್ದು, ಕೆಲವರ ಚಿತಾವಣೆ ಯಿಂದ ಪ್ರಮುಖರು ಬಂದಿಲ್ಲವೆಂದು ಮಾರ್ನುಡಿದರು.

ಕಾರ್ಯಾಧ್ಯಕ್ಷ ಬೇಸರ: ಅಭಿಮಾನಿ ವೇದಿಕೆ ಕಾರ್ಯಾಧ್ಯಕ್ಷ ಬೆಲ್ಲು ನಂಜಪ್ಪ ಮಾತನಾಡಿ, ಕುಮಾರಸ್ವಾಮಿ ಅಭಿಮಾನಿ ವೇದಿಕೆಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ದಳ ಮುಖಂಡರು ಮೂಗು ತೂರಿಸಿ ಗೊಂದಲ ಸೃಷ್ಟಿಸಿದ್ದಾಗಿ ತಿಳಿಸಿದರು. ಒಟ್ಟಿನಲ್ಲಿ ಗೊಂದಲದ ನಡುವೆ ಒಂದಿಷ್ಟು ಮಂದಿ ಇಂದು ಮನೆ ಮನೆಗೆ ಜೆ.ಡಿ.ಎಸ್. ಹೆಸರಿನಲ್ಲಿ ಪ್ರಚಾರ ನಡೆಸಿದ್ದು ಕಂಡುಬಂತು. ಬಿ.ಎಸ್. ಭರತ್ ಕುಮಾರ್, ತುಂತಜೆ ಗಣೇಶ್ ಸೇರಿದಂತೆ ಅಭಿಮಾನಿ ವೇದಿಕೆ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.