*ಗೋಣಿಕೊಪ್ಪಲು, ಫೆ. 10: ಕಾನೂರು ಗ್ರಾ.ಪಂ. ವ್ಯಾಪ್ತಿಯ ಕೋತೂರು ಗ್ರಾಮದ ಅಮ್ಮಕೊಡವ ಜನಾಂಗದ ಸ್ಮಶಾನಕ್ಕೆ ಹೋಗುವ ದಾರಿಗೆ 12 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾದ ಕಿರು ಸೇತುವೆಯನ್ನು ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆ ಗೊಳಿಸಿದರು.

ಹಲವು ಶತಮಾನಗಳಿಂದ ಅಮ್ಮಕೊಡವ ಜನಾಂಗದವರು ಸ್ಮಶಾನಕ್ಕೆ ಶವ ಸಾಗಿಸಲು ಸಣ್ಣ ಕಿರುದಾರಿಯಲ್ಲಿ ನಡೆದು ಸಾಗಬೇಕಾಗಿತ್ತು. ಈ ಸಂದರ್ಭ ತೋಡು, ಗದ್ದೆಗಳನ್ನು ದಾಟಿ ಹೋಗ ಬೇಕಾದುದರಿಂದ ಮಳೆಗಾಲದಲ್ಲಿ ಬಹಳಷ್ಟು ಕಷ್ಟ ಅನುಭವಿಸಬೇಕಾಗಿತ್ತು. ಶವವನ್ನು ಇಬ್ಬರಷ್ಟೇ ಹಿಡಿದು ಹೋಗುವ ಸಣ್ಣ ಕಾಲು ದಾರಿ ಇದಾಗಿತ್ತು. ಈ ಮಾರ್ಗವನ್ನು ವಿಸ್ತರಿಸಿ ತೋಡು ನೀರು ಹರಿದು ಹೋಗುವ ಜಾಗದಲ್ಲಿ ಸೇತುವೆ ನಿರ್ಮಿಸಬೇಕು ಎಂದು ಶಾಸಕರಲ್ಲಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಪಶ್ಚಿಮ ಘಟ್ಟ ಅಭಿವೃದ್ಧಿ ಅನುದಾನದಲ್ಲಿ 10 ಲಕ್ಷ ಮತ್ತು ಶಾಸಕರ ಸ್ಥಳೀಯ ಅಭಿವೃದ್ಧಿಯಲ್ಲಿ 2 ಲಕ್ಷ ಅನುದಾನವನ್ನು ಸೇತುವೆ ನಿರ್ಮಾಣ ಕಾಮಗಾರಿಗೆ ಮೀಸಲಿರಿಸಿ ಕ್ರಮಕ್ಕೆ ಕೈಗೊಂಡಿದ್ದರು.

ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೋಪಯ್ಯ ಗ್ರಾಮೀಣ ಅಭಿವೃದ್ಧಿ ಚಿಂತನೆಯಿಂದ ಅನುದಾನ ಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರದಿಂದ ಅನುದಾನ ಕಡಿಮೆ ಬಂದಿದೆ. ಇದರಲ್ಲಿ ನಮ್ಮ ಕನಸನ್ನು ಸಹಕಾರಗೊಳಿಸುವ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿಲ್ಲ. ಆದರೂ ಅನುದಾನವನ್ನು ಸಂಪೂರ್ಣವಾಗಿ ಬಳಸಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂಬ ತೃಪ್ತಿ ಇದೆ ಎಂದರು.

ಗ್ರಾಮದ ಹಿರಿಯ ಗ್ರಾಮಸ್ಥ ವಿಠಲ್ ಮಾತನಾಡಿ ಶಾಸಕರ ವಿಶೇಷ ಪ್ರಯತ್ನದಿಂದ ಜನಾಂಗದ ಹಲವು ವರ್ಷಗಳ ಕನಸು ನನಸಾಗಿದೆ. ಇವರ ಈ ಸೇವೆಯನ್ನು ಜನಾಂಗ ಸ್ಮರಿಸುತ್ತದೆ ಎಂದರು. ಕಾನೂರು ಗ್ರಾ.ಪಂ. ಸದಸ್ಯ ಕೆ.ಆರ್. ಸುರೇಶ್ ಮಾತನಾಡಿದರು.

ಕಾನೂರು ಗ್ರಾ.ಪಂ. ಅಧ್ಯಕ್ಷೆ ಲತಾ ಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸದಸ್ಯ ಪ್ರಕಾಶ್, ಗ್ರಾ.ಪಂ. ಸದಸ್ಯ ಸುಳ್ಳಿಮಾಡ ದೀಪಕ್, ಬಿ.ಜೆ.ಪಿ. ಕಾನೂರು ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡೇಮಾಡ ಮಾಚು, ಜಿಲ್ಲಾ ವರ್ತಕರ ಪ್ರಕೋಷ್ಟ ಅಧ್ಯಕ್ಷ ಗಿರೀಶ್ ಗಣಪತಿ, ತಾಲೂಕು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು, ಅಮ್ಮಕೊಡವ ಸಮಾಜದ ಅಧ್ಯಕ್ಷ ಎಂ.ಎ. ರಾಜು, ಮಹಿಳಾ ಅಮ್ಮಕೊಡವ ಸಮಾಜದ ಅಧ್ಯಕ್ಷೆ ಎಂ.ಆರ್. ಶ್ವೇತ, ಕಾನೂರು ಪ್ರಾಥಮಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಳಮೇಂಗಡ ವಿವೇಕ್, ತಾಲೂಕು ಫೆಡರೇಷನ್ ಸದಸ್ಯ ಮಲ್ಲಂಡ ಮಧು ದೇವಯ್ಯ, ಗ್ರಾಮಸ್ಥರು ಹಾಗೂ ಅಮ್ಮಕೊಡವ ಸಮಾಜದ ಜನಾಂಗದ ಸದಸ್ಯರು ಹಾಜರಿದ್ದರು.