ಗೋಣಿಕೊಪ್ಪಲು ವರದಿ, ಫೆ. 10: ನಿಟ್ಟೂರು ಲಕ್ಷ್ಮಣತೀರ್ಥ ನದಿಗೆ ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ್ರವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.

ನಿರ್ಮಿಸಿರುವ ಸೇತುವೆ ಕಾಮಗಾರಿ ಶೇ. 40 ಮಾತ್ರ ಪೂರ್ಣಗೊಂಡಿದ್ದು ಕಳೆದ ಎರಡು ತಿಂಗಳಿಂದ ಕೆಲಸ ತೀರ ಮಂದಗತಿಯಲ್ಲಿ ಸಾಗುತ್ತಿದೆ ಹೀಗಾಗಿ ಮುಂಬರುವ ಮಳೆಗಾಲದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ. ಹಳೆಯ ಸೇತುವೆ ಕೂಡ ದುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅದರಿಂದಾಗಿ ಕಾಮಗಾರಿಯನ್ನು ತುರ್ತಾಗಿ ಗುಣಮಟ್ಟದಿಂದ ಮುಗಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ನಿರ್ದೇಶಕ ಕೊಟ್ಟಂಗಡ ಮಂಜುನಾಥ್ ಇದ್ದರು.