ಸಿದ್ದಾಪುರ, ಫೆ. 10: ಬೀಟಿಕಾಡುವಿನ ಕಾಫಿ ತೋಟದಲ್ಲಿ ಮತ್ತೊಮ್ಮೆ ಹುಲಿ ಪ್ರತ್ಯೆಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಹಾಗೂ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಕೆಲವು ದಿನಗಳಿಂದ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದ ಒಳಗೆ ಕಾಡು ಕೋಣವೊಂದರ ಮೇಲೆ ಧಾಳಿ ನಡೆಸಿ ಸಾಯಿಸಿ ಭಾಗಶಃ ತಿಂದು ಅಟ್ಟಹಾಸ ಮೆರೆದಿತ್ತು. ನಂತರ ಆ ಭಾಗದ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ಬಗ್ಗೆ ಕಾರ್ಮಿಕರು ಭಯಭೀತರಾಗಿದ್ದರು.

ಅಲ್ಲದೇ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿ ದ್ದರು. ಈ ಬಗ್ಗೆ ‘ಶಕ್ತಿ’ಯು ವರದಿ ಪ್ರಕಟಿಸಿದ ಬೆನ್ನಲೇ ಅರಣ್ಯ ಇಲಾಖೆಯು ಹುಲಿಯನ್ನು ಸೆರೆ ಹಿಡಿಯಲು ವೀರಾಜ ಪೇಟೆ ತಾಲೂಕು ಡಿ.ಎಫ್.ಓ. ಮರಿಯ ಕ್ರಿಷ್ಟಿರಾಜ್ ಅವರ ಮಾರ್ಗ ದರ್ಶನದಲ್ಲಿ ಎ.ಸಿ.ಎಫ್. ರೋಶಿಣಿ ಹಾಗೂ ಉಪ ವಲಯ ಅರಣ್ಯಾಧಿ ಕಾರಿ ದೇವಯ್ಯ ಸೇರಿ ಎಮ್ಮೆಗುಂಡಿ ಕಾಫಿ ತೋಟದ ಸ್ವರ್ಣಗಿರಿ ಬಳಿ ಬೋನ್ ಇರಿಸಲಾಗಿತ್ತು.

ಆದರೆ ಹುಲಿಯು ಅತ್ತ ಸುಳಿಯದೇ ಇದೀಗ ಮತ್ತೊಮ್ಮೆ ಬೀಟಿಕಾಡುವಿನ ಕಾಫಿ ತೋಟದಲ್ಲಿ ಓಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಕಾರ್ಮಿಕರು ಹಾಗೂ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಹುಲಿಯ ಚಲನ-ವಲನ ಗಮನಿಸಿ ಸದ್ಯದಲ್ಲೇ ಹುಲಿಯನ್ನು ಸೆರೆ ಹಿಡಿಲಾಗುವದು ಎ.ಸಿ.ಎಫ್. ರೋಶಿಣಿ ತಿಳಿಸಿದ್ದಾರೆ.

- ವಾಸು