ಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ತಾ. 11ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ಪದವಿಪೂರ್ವ ಕಾಲೇೀಜು ಮೈದಾನದಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ಕು ಪತ್ರಕರ್ತರ ತಂಡಗಳು ಪಾಳ್ಗೊಳ್ಳಲಿದೆ ಎಂದು ಶನಿವಾರಸಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಪತ್ರಕರ್ತರು ವರ್ಷದ 365 ದಿನಗಳು ಕರ್ತವ್ಯದಲ್ಲಿ ನಿರತರಾಗಿರುವದರಿಂದ ಒಂದು ದಿನ ತಮ್ಮ ದಿನವನ್ನು ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಂತಹ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಪತ್ರಕರ್ತರ ತಂಡಗಳಾದ ವೀರಾಜಪೇಟೆ ಸೌತ್ ಟೈಗರ್ಸ್, ಸೊಮವಾರಪೇಟೆಯ ನಾರ್ಥ್ ಲಯನ್ಸ್ ತಂಡ ಹಾಗೂ ಮಡಿಕೇರಿಯ ಮೀಡಿಯ ಇಲೆವೆನ್ ಹಾಗೂ ಟೀಂ ಕೋಬ್ರ ತಂಡಗಳು ಪಾಲ್ಗೊಳ್ಳಲಿವೆ. ಕೊಡಗು ಜಿಲ್ಲೆ ಹಾಗೂ ತಾಲೂಕಿನ ಪತ್ರಕರ್ತರ ಸಹಕಾರದೊಂದಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು. ಇದಕ್ಕೆ ಅನೇಕ ಸ್ಥಳೀಯರ ಸಹಕಾರವು ಇದೆ ಎಂದರು.
ಸಂಘದ ಕಾರ್ಯದರ್ಶಿ ಚೆರಿಯಮನೆ ಸುರೇಶ್ ಮಾಹಿತಿ ನೀಡುತ್ತಾ ವಿಜೇತ ತಂಡಗಳಿಗೆ ಅಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಹಾಗೂ ವೈಯಕ್ತಿಕ ಬಹುಮಾನ ನೀಡಲಾಗುವದು ಎಂದರು.
ಕ್ರೀಡಾಕೂಟದ ಸಂಚಾಲಕ ವಿ.ಸಿ. ಸುರೇಶ್ ಒಡೆಯನಪುರ ಮಾತನಾಡಿ, ಪ್ರದರ್ಶನ ಪಂದ್ಯಾಟವು ಶನಿವಾರಸಂತೆ ಗೋಬಳಿಯ ಸರ್ಕಾರಿ ನೌಕರರ ತಂಡ ಹಾಗೂ ಜಿಲ್ಲಾ ಪತ್ರಕರ್ತರ ತಂಡಗಳ ನಡುವೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಕ್ರೀಡಾಕೂಟವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಲಿದ್ದಾರೆ. ಅದ್ಯಕ್ಷತೆಯನ್ನು ಶನಿವಾರಸಂತೆ ಪತ್ರಕರ್ತರ ಸಂಘದ ಅದ್ಯಕ್ಷ ಹರೀಶ್ ವಹಿಸಲಿದ್ದು, ಉದ್ಯಮಿ ಹರಪಳ್ಳಿ ರವೀಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಎ.ಆರ್. ಕುಟ್ಟಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಮಹಮ್ಮದ್ ಗೌಸ್, ಉಪಾಧ್ಯಕ್ಷೆ ಗೀತಾ ಹರೀಶ್, ನಿಕಟ ಪೂರ್ವ ಸರ್ಕಾರಿ ಅಭಿಯೋಜಕ ಚಂದ್ರಮೌಳಿ, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ, ಮಾಜಿ ಗ್ರಾಮ ಪಂಚಾಯಿತಿ ಅದ್ಯಕ್ಷ ಎಸ್.ಎನ್. ರಘು ಮುಂತಾದÀವರು ಪಾಲ್ಗೊಳ್ಳಲಿದ್ದಾರೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ. ಐಎನ್‍ಟಿಸಿಯುನ ಉಪಾದ್ಯಕ್ಷ ನಾಪಂಡ ಮುತ್ತಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಪತ್ರಕರ್ತರ ಸಂಘದ ರಾಜ್ಯ ಪ್ರತಿನಿದಿ ಮುರುಳಿದರ್, ಸೋಮವಾರಪೇಟೆ ಪ್ರೆಸ್‍ಕ್ಲಬ್ ಅಧ್ಯಕ್ಷ ಎಸ್,ಮಹೇಶ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರಸಂತೆಯ ಪತ್ರಕರ್ತರು ಉಪಸ್ಥಿತರಿದ್ದರು.