ವೀರಾಜಪೇಟೆ, ಫೆ. 9: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿಯ ಒಂದನೇ ಪೆರುಂಬಾಡಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮಂಜೂರಾಗಿರುವ ಜಾಗವನ್ನು ಸ್ಥಳೀಯ ಭೂ ಮಾಲೀಕರೊಬ್ಬರು ಕಬಳಿಸಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾ. 12 ರಂದು ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಜಿಲ್ಲಾ ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಕೆ. ಮೊಣ್ಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆರುಂಬಾಡಿಯ ಸರ್ವೆ ಸಂಖ್ಯೆ 241/4ರಲ್ಲಿ 50 ಸೆಂಟ್ ಜಾಗದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಕುಟುಂಬಗಳಿಗೆ ಸ್ಮಶಾನಕ್ಕೆಂದು ಮಂಜೂರಾಗಿದೆ. ಈ ಜಾಗದ ಒತ್ತಿನಲ್ಲಿರುವ ಸ್ಥಳೀಯ ಭೂಮಾಲೀಕರು ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಸ್ಮಶಾನದ ಜಾಗಕ್ಕೆ ತೆರಳುವ ರಸ್ತೆಗೆ ಬೇಲಿ ನಿರ್ಮಿಸಿಕೊಂಡಿದ್ದಾರೆ. ಬೇಲಿ ತೆರವು ಗೊಳಿಸುವಂತೆ ತಹಶೀಲ್ದಾರ್‍ರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೂ, ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಮನವಿಗೆ ಯಾವದೇ ಸ್ಪಂದನ ದೊರೆಯದ ಕಾರಣ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಹೆಚ್.ವಿ. ಅಣ್ಣಯ್ಯ, ಹೆಚ್.ಎಂ. ಸುರೇಶ್, ಹೆಚ್.ಎಂ. ತಿಮ್ಮ, ಹೆಚ್.ಬಿ. ಕೃಷ್ಣ ಉಪಸ್ಥಿತರಿದ್ದರು.