ಮಡಿಕೇರಿ, ಫೆ. 9: ನಿನ್ನೆ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಶಾಂತಗಿರಿ ತೋಟ ತಿರುವಿನ ಹೆದ್ದಾರಿಯಲ್ಲಿ ಎರಡು ಬಸ್‍ಗಳ ನಡುವೆ ಸಂಭವಿಸಿದ್ದ ಮುಖಾಮುಖಿ ಡಿಕ್ಕಿ ಪ್ರಕರಣದಲ್ಲಿ ತೀವ್ರ ಗಾಯ ಗೊಂಡಿದ್ದ ಮಹಿಳಾ ಪ್ರಯಾಣಿ ಕರೊಬ್ಬರು ಇಂದು ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹುಣಸೂರು ಪಂಚವಳ್ಳಿ ಕಿಕ್ಕೇರಿಕಟ್ಟೆ ಕಾಡೆಯನಹಳ್ಳಿ ನಿವಾಸಿ ಕರೆಮನೆ ರಾಮಪ್ಪ (ಬಾಬು) ಎಂಬವರ ಪತ್ನಿ ಶಾಂತಿ (66) ಎಂಬವರೇ ಮೃತ ದುರ್ದೈವಿಯಾಗಿದ್ದಾರೆ.ನಿನ್ನೆ ಶಾಂತಿ ಅವರು ಕೇವಲ 6 ದಿನಗಳ ಹಿಂದೆಯಷ್ಟೇ ತಮ್ಮ ಮಗನಿಗೆ ಜನಿಸಿರುವ ಮೊಮ್ಮಗುವನ್ನು ನೋಡಲೆಂದು ಕತ್ತಲೆಕಾಡು ಬಳಿಯ ಜೇನುಕೊಲ್ಲಿಗೆ ಹುಣಸೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದಾಗ ಅಪಘಾತದಿಂದ ತೀವ್ರ ಗಾಯಗೊಂಡಿದ್ದರು.ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಬಳಿಕ 1.50ರ ಸುಮಾರಿಗೆ ಮರಣ ಹೊಂದಿದರೆಂದು, ಮೃತರ ಬಂಧುಗಳು ‘ಶಕ್ತಿ’ಗೆ ತಿಳಿಸಿದ್ದಾರೆ.

ದುರ್ದೈವಿ ಶಾಂತಿ ಅವರ ಪುತ್ರ ರೋಹಿತ್ ಹಾಗೂ ಸೊಸೆ ಹೇಮಾ ದಂಪತಿಗೆ ಜನಿಸಿರುವ ಚೊಚ್ಚಲ ಮಗುವನ್ನು ನೋಡುವ ಆಸೆ ನೆರವೇರುವ ಮುನ್ನ ಆಕೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ನಿನ್ನೆ ತಾಯಿ ಶಾಂತಿಯೊಂದಿಗೆ ತನ್ನ ಸೋದರನ ಮಗುವನ್ನು ನೋಡಲೆಂದು ಬರುತ್ತಿದ್ದ ಮಂಜುಳ ಅವರು ಕೂಡ ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇಂದು ತಾಯಿಯ ಸಾವಿನ ಸುದ್ದಿ ತಿಳಿದು ಅವರನ್ನು ಆಸ್ಪತ್ರೆಯಿಂದ ಬಂಧುಗಳು

(ಮೊದಲ ಪುಟದಿಂದ) ಮನೆಗೆ ಕರೆದೊಯ್ದಿದ್ದಾರೆ. ಅಲ್ಲದೆ, ಮೈಸೂರಿನ ಶಿಕ್ಷಕರ ಬಡಾವಣೆ ನಿವಾಸಿ ಮಂಡೇಪಂಡ ಸೀತಮ್ಮ ಮುತ್ತಪ್ಪ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆಂದು ಗಾಯಾಳುವಿನ ಕುಟುಂಬ ಮೂಲಗಳು ತಿಳಿಸಿವೆ.

ಉಳಿದಂತೆ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಡಿಕೇರಿ ಘಟಕದ ಬಸ್ ನಿರ್ವಾಹನ ಬಿ.ಕೆ. ಜಗದೀಶ್ ಹಾಗೂ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಆರು ಮಂದಿ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆಂದು ಆಸ್ಪತ್ರೆ ಮೂಲದಿಂದ ಗೊತ್ತಾಗಿದೆ.

ಅಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಇಬ್ಬರು ದುರ್ದೈವಿ ಮೃತ ಚಾಲಕರಾದ ಬಿ.ಎಸ್. ಪಾಲಾಕ್ಷ ಹಾಗೂ ಮೊೈದೀನ್ ಶರೀಫ್ ಸೇರಿದಂತೆ ಎಲ್ಲಾ ಗಾಯಾಳುಗಳಿಗೆ ವಿಮಾ ನೆರವಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಇಲಾಖೆಯ ವತಿಯಿಂದ ತಿಳಿದುಬಂದಿದೆ.