ಮಡಿಕೇರಿ, ಫೆ. 8: ಶಿಕ್ಷಣ ನೀಡುವದು ಮಾತ್ರ ಶಿಕ್ಷಕರ ಕೆಲಸ ವಾಗಿರದೆ ಸಾರ್ವಜನಿಕ ಸೇವೆ ಯೊಂದಿಗೆ ಶಾಲೆಯ, ಊರಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಪಾತ್ರವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಕಿವಿಮಾತು ಹೇಳಿದರು.
ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪರವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಶೈಕ್ಷಣಿಕ ವಿಚಾರಗೋಷ್ಠಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಊರಿನಲ್ಲಿ ಏನಾದರೂ ಸಮಸ್ಯೆ ಎದುರಾದರೆ ಅಲ್ಲಿನ ಶಿಕ್ಷಕರನ್ನು ಕೂರಿಸಿಕೊಂಡು ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದರು. ಗ್ರಾಮಗಳ ಸಮಸ್ಯೆ ಬಗ್ಗೆ ಶಿಕ್ಷಕರುಗಳಿಗೆ ಅರಿವಿರುತ್ತದೆ. ವಿದ್ಯುತ್, ಶೌಚಾಲಯ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸ ಬೇಕೆಂದು ಸಲಹೆ ಮಾಡಿದರು. ಸರಕಾರಿ ಶಾಲೆಗಳು ಅಭಿವೃದ್ಧಿ ಯಾಗಬೇಕೇ ವಿನಃ ಯಾವದೇ ಕಾರಣಕ್ಕೂ ಮುಚ್ಚಬಾರದು. ಶಾಲೆಗಳ ಅಭಿವೃದ್ಧಿಯಲ್ಲಿ ಊರಿನ ಸಂಘ-ಸಂಸ್ಥೆಗಳು, ಹಿರಿಯರು ಕೈಜೋಡಿಸಿ ದರೆ ಬೆಳವಣಿಗೆ ಸಾಧ್ಯ. ಎಲ್ಲರೂ ಹೊಂದಾಣಿಕೆಯೊಂದಿಗೆ ಸೇವಾ ಕಾರ್ಯ ಮಾಡಬೇಕೆಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಭಾಗ್ಯ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹಾಗೆಯೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗೆ ಬರುವವರು ಬಡ ಕೂಲಿ ಕಾರ್ಮಿಕ ಮಕ್ಕಳು ಎಂದು ನೋವಿನಿಂದ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವದು ಬೇಸರದ ಸಂಗತಿ, ಶಾಲೆಗಳಲ್ಲಿ ಮಾರ್ಗ ದರ್ಶನದ ಕೊರತೆ ಇದೆ. ಹಾಜರಾತಿ ಕೊರತೆ ಇದೆ. ಗೈರುಹಾಜರಾದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಕರೆತನ್ನಿ ಮತ್ತು ಶಿಕ್ಷಣದ ಗುಣಮಟ್ಟವನ್ನು ಕಾಪಾಡಿ, ಉತ್ತಮ ಶಿಕ್ಷಣ ನೀಡಿ ಎಂದು ಶಿಕ್ಷಕರಿಗೆ ಸಲಹೆ ಮಾಡಿದರು.
ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್. ಚೇತನ್ ಮಾತನಾಡಿ ಶಿಕ್ಷಕರು ಕಡಿಮೆ ಸಂಬಳದಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಕುಮಾರ್ ಮಾತನಾಡಿ, ಪ್ರಾಥಮಿಕ ಶಿಕ್ಷಕರು ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಹಾಗೆಯೇ ಸರ್ಕಾರಿ ಶಾಲೆಗಳನ್ನು ಉಳಿಸಲು ಬೆಳೆಸಲು ಎಲ್ಲರೂ ಒಟ್ಟಾಗಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆ. ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯಿತ್ರಿ, ಮಡಿಕೇರಿ ತಾಲೂಕಿನ ಬಿ.ಆರ್.ಸಿ. ಮಹಾದೇವ, ವೀರಾಜಪೇಟೆ ತಾಲೂಕಿನ ಬಿ.ಆರ್.ಸಿ. ಮಾಲತಿ, ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿಯಾದ ಬಿ.ದೇವಕಿ, ಕಾರ್ಯಕಾರಿ ಮಂಡಳಿಯ ಖಜಾಂಚಿ ವಿ.ಕೆ. ಲಲಿತ, ಸಹ ಕಾರ್ಯದರ್ಶಿ ಎಂ. ಗಣೇಶ್, ಸಂಘಟನಾ ಕಾರ್ಯದರ್ಶಿ ಹೆಚ್.ಜಿ. ಸೀತಾ, ಕಾರ್ಯಕಾರಿ ಮಂಡಳಿಯ ನಿರ್ದೇಶಕರುಗಳಾದ ಎಸ್. ಕೇಶವ, ಪಿ.ಪಿ. ಸುರೇಶ್, ಹೆಚ್.ಆರ್. ರಾಜು, ಬಿ.ಎಂ. ವಿಜಯ, ಪಾರ್ವತಿ, ವಿಜಯಕುಮಾರ್, ಕೆ.ಜಿ. ರೇಣುಕಾ ಸ್ವಾಮಿ, ಪುಟ್ಟಸ್ವಾಮಿ ಇತರರು ಇದ್ದರು.