ಮಡಿಕೇರಿ, ಫೆ. 8: ವ್ಯಾಪಾರ ನಡೆಸುವ ಎಲ್ಲರು ತಮ್ಮ ಮತೀಯ ಅಥವಾ ಜಾತಿ ವ್ಯವಸ್ಥೆಯಿಂದ ಹೊರಬಂದು ಸಹಬಾಳ್ವೆಯೊಂದಿಗೆ, ವ್ಯಾಪಾರ ಧರ್ಮವನ್ನೇ ಪಾಲಿಸುವಂತಾಗಬೇಕೆಂದು ಕೊಡಗು ಜಿಲ್ಲಾ ಚೇಬಂರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಹಾಗೂ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಕರೆ ನೀಡಿದರು. ಇಲ್ಲಿನ ಮಾರುಕಟ್ಟೆ ವರ್ತಕರ ಹಿತರಕ್ಷಣಾ ಸಂಘದ ಕಚೇರಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ವರ್ತಕರು ಒಗ್ಗೂಡಿ ಬದುಕು ಕಂಡುಕೊಳ್ಳುವದರೊಂದಿಗೆ ಸಮಾಜ ಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದ ಅವರು, ಕೊಡಗಿನಂತಹ ನೆಲದಲ್ಲಿ ಯಾವದೇ ಸಂಘರ್ಷಕ್ಕೆ ಅವಕಾಶವಾಗದಂತೆ ಸೇವಾ ಮನೋಭಾವದಿಂದ ವೃತ್ತಿ ಧರ್ಮ ಪಾಲಿಸುವಂತೆ ಹೇಳಿದರು. ಪ್ಲಾಸ್ಟಿಕ್ ಮುಕ್ತ ನಗರವಾಗಿಸಿ ಸ್ವಚ್ಛತೆ ಕಾಪಾಡುವ ದಿಸೆಯಲ್ಲಿ ವರ್ತಕರು ಮೊದಲು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕೆಂದರು.ನಗರಸಭೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಪಾಲ್ಗೊಂಡು ಮಾತನಾಡುತ್ತಾ, ವರ್ತಕರು ಸಂಘಟನೆಯಲ್ಲಿ ತೊಡಗಿರುವದು ಅನಿವಾರ್ಯ ವೆಂದರಲ್ಲದೆ, ರಾಜಕೀಯ ನುಸುಳದಂತೆ ಸಾಮರಸ್ಯದಿಂದ ವ್ಯವಹರಿಸಬೇಕೆಂದು ಸಲಹೆ ನೀಡಿದರು. ವರ್ತಕರಿಗೆ ಮಾರುಕಟ್ಟೆ ಆವರಣದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವದು ಎಂದು ಆಶ್ವಾಸನೆ ನೀಡಿದರು. ನಗರಸಭಾ ಸದಸ್ಯರು ಗಳಾದ ಕೆ.ಜೆ. ಪೀಟರ್ ಹಾಗೂ ತಜಸುಂ ಮಾತನಾಡಿ, ವರ್ತಕರು ಪ್ಲಾಸ್ಟಿಕ್ ನಿರ್ಮೂಲನೆಯೊಂದಿಗೆ ಮಾರುಕಟ್ಟೆ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು, ರೋಗ ರುಜಿನಗಳಿಗೆ ಅವಕಾಶವಾಗದಂತೆ ಜಾಗೃತರಾಗುವಂತೆ ಸಲಹೆ ನೀಡಿದರು. ನಗರಸಭೆಯಿಂದ ಮಾರುಕಟ್ಟೆ ಸಂಕೀರ್ಣದಲ್ಲಿ ಮೂಲಭೂತ ಸೌಲಭ್ಯ ದೊರಕಿಸಲು
(ಮೊದಲ ಪುಟದಿಂದ) ಪ್ರಯತ್ನಿಸುವದಾಗಿಯೂ ಭರವಸೆ ನೀಡಿದರು.
ಮಾರುಕಟ್ಡ ವರ್ತಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎಂ. ಇಸ್ಮಾಯಿಲ್ ಮಾತನಾಡಿ, ಮಾರುಕಟ್ಟೆಯಲ್ಲಿ ಯಾರೊಬ್ಬರೂ ಸಂಘರ್ಷಕ್ಕೆ ಅವಕಾಶ ನೀಡದಂತೆ ಎಲ್ಲರ ಹಿತರಕ್ಷಣೆಗಾಗಿ ಸಂಘ ಸ್ಥಾಪಿಸಲಾಗಿದೆ ಎಂದರು. ಸಂಘಟನೆಯ ಚಟುವಟಿಕೆಗಳಿಗೆ ನಗರಸಭೆಯಿಂದ ಸೌಲಭ್ಯಗಳನ್ನು ಮತ್ತು ಮಾರುಕಟ್ಟೆಗೆ ನೀರು, ವಿದ್ಯುತ್‍ನಂತಹ ಮೂಲ ಸೌಕರ್ಯ ಒದಗಿಸಿಕೊಟ್ಟು ಶೀಘ್ರ ಉದ್ಘಾಟನೆಗೆ ಮುಂದಾಗುವಂತೆ ಒತ್ತಾಯಿಸಿದರು.
ಕಾರ್ಯದರ್ಶಿ ಎಂ.ಎ. ಅಬ್ದುಲ್ ರಜಾಕ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಬಿ.ಜೆ. ಅಂಕುಶ್ ಕಾರ್ಯಕ್ರಮ ನಿರೂಪಿಸಿದರು. ನೂತನ ಸಮಿತಿ ಖಜಾಂಚಿಯಾಗಿ ಡಿ.ಎನ್. ಚಂದ್ರಶೇಖರ್, ಸಹ ಕಾರ್ಯದರ್ಶಿ ಎಂ.ಎ. ಮಹಮ್ಮದ್ ಆಲಿ, ಸದಸ್ಯರು ಗಳಾದ ಎಂ.ಬಿ. ಶರೀಫ್, ಮಹಮ್ಮದ್, ಹನೀಫ್, ಮನುಕುಮಾರ್, ಡಿ.ಪಿ. ಉಮೇಶ್, ಸೈಫುದ್ದೀನ್ ಮೊದಲಾದವರು ಪಾಲ್ಗೊಂಡಿದ್ದರು.