ಮಡಿಕೇರಿ, ಫೆ. 8: ಜಿಲ್ಲೆಯ ಮೂಲಕ ಕೇರಳದ ತಲಚೇರಿಯಿಂದ ಮೈಸೂರುವಿಗೆ ಹಾದುಹೋಗಲಿರುವ ರೈಲ್ವೇ ಮಾರ್ಗವನ್ನು ಯಾವದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಸಚಿವರಿಗೆ ಶೂನ್ಯ ವೇಳೆಯಲ್ಲಿ ಪ್ರಶ್ನೆ ಮೂಲಕ ಮನವಿ ಮಾಡಿದ್ದಾರೆ.ಕೊಡಗು ಜಿಲ್ಲೆಯ ಮೂಲಕ ಹಾದು ಹೋಗಲಿರುವ ಪ್ರಸ್ತಾವಿತ ಮೈಸೂರು-ಪಿರಿಯಾಪಟ್ಟಣ, ತಿತಿಮತಿ-ಬಾಳೆಲೆ, ಕುಟ್ಟ-ಮಾನಂದವಾಡಿ, ಕೂತುಪರಂಬು-ತಲಚೇರಿ ರೈಲು ಮಾರ್ಗವು ಅನುಷ್ಠಾನಗೊಂಡರೆ ಕೊಡಗು ಜಿಲ್ಲೆಯ ಆನೆಕಾಡು ಮೀಸಲು ಅರಣ್ಯ, ಕೆದಕಲ್, ಸುಂಟಿಕೊಪ್ಪ ಸಮೀಪದ ಸಾವಿರಾರು ಎಕರೆ ಕಾಫಿ ತೋಟ ನಾಶವಾಗಲಿದೆ. ಅಲ್ಲದೆ ಸಾವಿರಾರು ವಿವಿಧ ಜಾತಿಯ ಮರಗಳ ಹನನವಾಗಲಿದೆ. ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ಕಾಡಲಿದ್ದು, ಆನೆಗಳ ಧಾಳಿಯಿಂದ ಬೆಳೆ ನಾಶ ಇನ್ನಷ್ಟೂ ಹೆಚ್ಚಾಗಲಿದೆ. ಅಲ್ಲದೇ ಈಗಾಗಲೇ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಮಾನವ-ಕಾಡು ಪ್ರಾಣಿ ಸಂಘರ್ಷ ಇನ್ನಷ್ಟು ಹೆಚ್ಚಾಗಿ ಜೀವಹಾನಿ ಹೆಚ್ಚಾಗಲಿದೆ.

ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಪ್ರಸ್ತಾವಿತ ಮೈಸೂರು-ಪಿರಿಯಾಪಟ್ಟಣ, ತಿತಿಮತಿ-ಬಾಳೆಲೆ, ಕುಟ್ಟ-ಮಾನಂದವಾಡಿ, ಕೂತುಪರಂಬು-ತಲಚೇರಿ ರೈಲು ಮಾರ್ಗವನ್ನು ಅನುಷ್ಠಾನ ಮಾಡದೆ ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಿವಾರಿಸಬೇಕೆಂದು ಮಾನ್ಯ ಮೂಲ ಸೌಕರ್ಯ ಅಭಿವೃದ್ಧಿ ಸಚಿವರ ಮೂಲಕ ಸರಕಾರದ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರು ಯಾವದೇ ಕಾರಣಕ್ಕೂ ಈ ರೈಲ್ವೇ ಮಾರ್ಗ ಅನುಷ್ಠಾನಗೊಳಿಸುತ್ತಿಲ್ಲ. ಈ ಬಗ್ಗೆ ಈಗಾಗಲೇ ವರದಿ ನೀಡಲಾಗಿದೆ. ಕೊಡಗು ಜಿಲ್ಲೆಯ ಜನತೆಯಲ್ಲಿ ಯಾವದೇ ಆತಂಕ ಬೇಡವೆಂದು ಹೇಳಿದರು.