ಮಡಿಕೇರಿ, ಫೆ. 8: ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಜಿ.ಪಂ. ಇಂಜಿನಿಯರ್ ವಿಭಾಗದ ಮೂಲಕ ರಾಜ್ಯ ಸರಕಾರ ರೂ. 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಮಾಹಿತಿ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರ ಪ್ರಯತ್ನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅನುದಾನ ಒದಗಿಸಿರುವದಾಗಿ ಹರೀಶ್ ತಿಳಿಸಿದ್ದಾರೆ.ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿರುವ
(ಮೊದಲ ಪುಟದಿಂದ) ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಪಾರದರ್ಶಕ ನಿಯಮಾನುಸಾರ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಸರಕಾರದ ಆದೇಶದಂತೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳ ಪ್ರಾರಂಭಿಕ ವೆಚ್ಚಕ್ಕಾಗಿ ಶೇ. 50 ರಷ್ಟು ಅನುದಾನವನ್ನು ಅನುಮೋದನೆಗೊಂಡ ನಂತರ ಬಿಡುಗಡೆ ಮಾಡುವದಾಗಿ, ಬಾಕಿ ಅನುದಾನವನ್ನು ಮುಂದಿನ ಸಾಲಿನ ಆಯವ್ಯಯದಲ್ಲಿ ಕಾಮಗಾರಿಯ ಪ್ರಗತಿಯನ್ನಾಧರಿಸಿ ಬಿಡುಗಡೆ ಮಾಡುವದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳ ವ್ಯಾಪ್ತಿಯ ರಸ್ತೆಗಳ ದುರಸ್ತಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಂತೆ ಹಾಗೂ ನಿಯಮಾನುಸಾರ ಸರಕಾರದ ಆದೇಶದಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮಡಿಕೇರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ನೀಡುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಕೂಡ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಿ 2017-18ನೇ ಸಾಲಿನಲ್ಲಿ ತುರ್ತು ಕೈಗೊಳ್ಳಬೇಕಾದ ಗ್ರಾಮೀಣ ರಸ್ತೆಗಳ ದುರಸ್ತಿ ಬಗ್ಗೆ ರೂಪಿಸಲಾದ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.