ಮಡಿಕೇರಿ, ಫೆ. 8: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ಲಿಂಗಮ್ಮ ಮತ್ತು ಚಿಕ್ಕಕೊಮಾರಿಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಜಾನಪದ ಲೋಕ ಪ್ರಶಸ್ತಿಗೆ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಭಾಜನರಾಗಿದ್ದಾರೆ.ಕಳೆದ ಬಾರಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿ ಜಿಲ್ಲಾ ಜಾನಪದ ಪರಿಷತ್ನ ಶಿಫಾರಸ್ಸಿನ ಮೇರೆಗೆ ಬೈತಡ್ಕ ಜಾನಕಿ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ಜಾನಪದ ಪರಿಷತ್ನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.ತಾ. 11 ರಂದು ರಾಮನಗರದಲ್ಲಿ ನಡೆಯುವ ಪ್ರವಾಸಿ ಜಾನಪದ ಲೋಕೋತ್ಸವದಲ್ಲಿ ಸಂಜೆ 5.30 ಗಂಟೆಗೆ ಬಹುಮಾನ ವಿತರಣೆ ನೆರವೇರಲಿದ್ದು, ಶ್ರೀ ಕ್ಷೇತ್ರ ಆದಿಚುಂಚನ ಗಿರಿಯ ಡಾ. ನಿರ್ಮಲಾ ನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಹಿಸಲಿದ್ದಾರೆ. ಕೃಷಿಕ್ ಸರ್ವೋದಯ ಫೌಂಡೇಶನ್ನ ಅಧ್ಯಕ್ಷ ಡಾ. ವೈ.ಕೆ. ಪುಟ್ಟ ಸೋಮೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ. ಸಿ.ಎಂ. ಲಿಂಗಪ್ಪ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಡಾ. ಎನ್. ಮಂಜುಳಾ ಮತ್ತಿತರರು ಭಾಗವಹಿಸಲಿ ದ್ದಾರೆ. ಪ್ರಶಸ್ತಿಯು ರೂ. 10 ಸಾವಿರ ನಗದು, ನೆನಪಿನ ಕಾಣಿಕೆಯನ್ನು ಒಳಗೊಂಡಿರುತ್ತದೆ ಎಂದು ಅನಂತ ಶಯನ ಅವರು ಮಾಹಿತಿ ನೀಡಿದ್ದಾರೆ.