ಸುಂಟಿಕೊಪ್ಪ, ಫೆ. 8: ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಉಭಯ ಬಸ್ ಚಾಲಕರಿಬ್ಬರೂ ಧಾರುಣ ಸಾವನ್ನಪ್ಪುವದರೊಂದಿಗೆ, ಗಂಭೀರ ಗಾಯಗೊಂಡಿರುವ ಕೆಲವರ ಸಹಿತ 23 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಸಂಭವಿಸಿದೆ.

ಕೊಡಗರಹಳ್ಳಿ ಬಳಿ ಶಾಂತಗಿರಿ ತೋಟದ ಹೆದ್ದಾರಿ ತಿರುವಿನಲ್ಲಿ ಇಂದು ಹಗಲು 10.50ರ ಸುಮಾರಿಗೆ ದುರ್ಘಟನೆ ಎದುರಾಗಿದೆ.ರಾಜ್ಯ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕಕ್ಕೆ ಸೇರಿದ ಬಸ್ (ಕೆ.ಎ. 19 ಎಫ್ - 3240) ಚಾಲಕ ಶನಿವಾರಸಂತೆ ಸಮೀಪದ ಬೆಳ್ಳಾರಳ್ಳಿ ನಿವಾಸಿ, ಬಿ.ಎಸ್. ಪಾಲಾಕ್ಷ (42) ಹಾಗೂ ಹುಣಸೂರು ಘಟಕದ ಬಸ್ (ಕೆ.ಎ. 09. ಎಫ್ - 4989) ಚಾಲಕರಾಗಿದ್ದ ಪಿರಿಯಾಪಟ್ಟಣ ಪಕ್ಕದ ಕಂಪಲಾಪುರ ನಿವಾಸಿ ಮೊೈದ್ದೀನ್ ಷರೀಫ್ (50) ಎಂಬವರುಗಳೇ ಮೃತರಾದ ದುರ್ದೈವಿಗಳು.

ಇಲ್ಲಿನ ಮಡಿಕೇರಿ ಘಟಕದ ಬಸ್ ಇಂದು ಬೆಳಿಗ್ಗೆ ನಗರದಿಂದ ಕುಶಾಲನಗರ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿತ್ತು. ಅತ್ತ ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದ ಹುಣಸೂರು ಘಟಕ ಬಸ್ ಶಾಂತಗಿರಿ ತೋಟದ ಬಳಿ ಹೆದ್ದಾರಿಯ ತಿರುವೊಂದರಲ್ಲಿ ಪರಸ್ಪರ ಎದುರಾಗಿದ್ದು, ಕ್ಷಣಮಾತ್ರದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ದುರ್ಘಟನೆ ವೇಳೆ ಚಾಲಕ ಪಾಲಾಕ್ಷ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮೊೈದ್ದೀನ್ ಷರೀಫ್ ಅವರನ್ನು ಸುಂಟಿಕೊಪ್ಪ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ.

ಮಡಿಕೇರಿ ಘಟಕದ ಬಸ್ಸಿನ ನಿರ್ವಾಹಕ ಶಾಂತಳ್ಳಿ ಸಮೀಪದ ಬೆಟ್ಟದಳ್ಳಿ ನಿವಾಸಿ ಬಿ.ಕೆ. ಜಗದೀಶ್ ಎಂಬವರಿಗೆ ಈ ಸಂದರ್ಭ ತಲೆಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಇತರ ನಾಲ್ವರು ಪ್ರಯಾಣಿಕರಿಗೂ ರಕ್ತಸ್ರಾವದೊಂದಿಗೆ ಗಾಯಗಳಾಗಿವೆ. ಅಲ್ಲದೆ ಮೈಸೂರಿನಿಂದ ಬರುತ್ತಿದ್ದ ಬಸ್ಸಿನಲ್ಲಿ ನಿರ್ವಾಹಕ ಮಲ್ಲಪ್ಪ ಸೇರಿದಂತೆ ಒಟ್ಟು 28 ಮಂದಿ ಪ್ರಯಾಣಿಕರಿದ್ದು, ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳೊಂದಿಗೆ 19 ಮಂದಿ ಘಾಸಿಗೊಂಡಿದ್ದಾರೆ.

ಈ ಭೀಕರ ಅಪಘಾತದ ಸುದ್ದಿ ತಿಳಿಯುತ್ತಲೇ ಹೆದ್ದಾರಿ ಮೂಲಕ ಬರುತ್ತಿದ್ದ ಇತರ

(ಮೊದಲ ಪುಟದಿಂದ) ವಾಹನಗಳು ಹಾಗೂ ಸರಕಾರಿ ಮತ್ತು ಖಾಸಗಿ ಆ್ಯಂಬುಲೆನ್ಸ್‍ಗಳ ಮುಖಾಂತರ ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಕರೆತರಲಾಯಿತು. ಸದನದಲ್ಲಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಸ್ಪತ್ರೆ ವೈದ್ಯರುಗಳನ್ನು ಸಂಪರ್ಕಿಸಿ ಕೂಡಲೇ ಪ್ರಾಣರಕ್ಷಣೆಗೆ ಧಾವಿಸಲು ಸಲಹೆ ನೀಡಿದರು.

ಜಿ.ಪಂ. ಸದಸ್ಯ ಲತೀಫ್ ಸಹಿತ ಸುಂಟಿಕೊಪ್ಪ ಸುತ್ತಮುತ್ತಲಿನ ನಾಗರಿಕರು ಗಾಯಾಳುಗಳನ್ನು ಸ್ಥಳದಿಂದ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಶ್ರಮಿಸಿದರೆ, ಸುಂಟಿಕೊಪ್ಪ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಗಳ ವೈದ್ಯ - ಸಿಬ್ಬಂದಿ ತ್ವರಿತ ಚಿಕಿತ್ಸೆ ಕಲ್ಪಿಸುವಲ್ಲಿ ಶ್ರಮ ವಹಿಸಿದ್ದರು.

ಹೆಚ್ಚಿನ ಚಿಕಿತ್ಸೆ : ಮೂಲತಃ ಕೊಡಗಿನವರಾದ ಮೈಸೂರು ರಾಧಾಕೃಷ್ಣ ನಗರ ನಿವಾಸಿ ಮಂಡೇಪಂಡ ಸೀತಮ್ಮ ಮುತ್ತಪ್ಪ (72) ಎಂಬ ನಿವೃತ್ತ ಶಿಕ್ಷಕಿ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲ್ಪಟ್ಟಿದ್ದಾರೆ.

ಅಲ್ಲದೆ ಬಸ್ ನಿರ್ವಾಹಕ ಬಿ.ಕೆ. ಜಗದೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹುಣಸೂರು ಬಳಿ ಹೆಬ್ಬಾಳ ನಿವಾಸಿ, ಶಾಂತಮ್ಮ ಎಂಬವರಿಗೂ ಮಾರಣಾಂತಿಕ ಗಾಯ ಗಳೊಂದಿಗೆ ಸ್ಥಳಾಂತರಿಸಲಾಗಿದೆ.

ಇನ್ನು ಬೆಂಗಳೂರಿನ ಹೆಚ್‍ಎಎಲ್ ಹಾಗೂ ಸೇನೆಯಲ್ಲಿ ನಿವೃತ್ತಿ ಹೊಂದಿರುವ ಮಾಜಿ ಸೈನಿಕ ಕಕ್ಕಬ್ಬೆ ಮೂಲದ ಕಲಿಯಂಡ ಎ. ಚರ್ಮಣ್ಣ (68) ಅವರಿಗೂ ತೀವ್ರ ಪೆಟ್ಟಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇವರು ನಗರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಬರುತ್ತಿದ್ದರು. ಅಲ್ಲದೆ ಅಪಘಾತ ಸಂದರ್ಭ ಬಸ್ಸಿನಲ್ಲಿದ್ದ ರಮೇಶ್ ಹಾಗೂ ವಿನುತ ಎಂಬವರಿಗೆ ಕೈ ಮೂಳೆ ಮುರಿದಿರುವ ಹಿನ್ನೆಲೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ. ಇಲ್ಲಿನ ರಾಜ ರಾಜೇಶ್ವರಿ ನಗರದ ಮಹಮ್ಮದ್ ಫಾರೂಕ್, ಕೂಡುಮಗಳೂರಿನ ನಾರಾಯಣ ಸ್ವಾಮಿ ಸೇರಿದಂತೆ ಇತರ ಗಾಯಾಳುಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ಇಂದು ಸಂಭವಿಸಿದ ಎರಡು ಬಸ್‍ಗಳ ನಡುವಿನ ಭೀಕರ ಅಪಘಾತದಿಂದ ಉಭಯ ಬಸ್‍ಗಳಿಂದ 12 ಮಂದಿ ಮಹಿಳಾ ಪ್ರಯಾಣಿಕರು ಮತ್ತು 11 ಮಂದಿ ಪುರುಷರು ಗಾಯಗೊಂಡಿದ್ದಾರೆ. ಈ ಪೈಕಿ ಬಹುತೇಕ ಗಾಯಾಳುಗಳು ಜಿಲ್ಲೆಯವರೇ ಆಗಿದ್ದು, ಮೈಸೂರಿನಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರೆಂದು ಗೊತ್ತಾಗಿದೆ.

ಅಪಘಾತ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆ ಯಲ್ಲಿ ಮೃತಪಟ್ಟಿರುವ ಇಬ್ಬರು ಚಾಲಕರ ಪಾರ್ಥೀವ ಶರೀರಗಳ ಮರಣೋತ್ತರ ಪರೀಕ್ಷೆ ಬಳಿಕ, ಮೃತರ ಬಂಧುಗಳಿಗೆ ಒಪ್ಪಿಸುವದರೊಂದಿಗೆ ದುರ್ದೈವಿಗಳ ಹುಟ್ಟೂರಾದ ಬೆಳ್ಳಾರಳ್ಳಿ ಹಾಗೂ ಪಿರಿಯಾಪಟ್ಟಣಕ್ಕೆ ಕೊಂಡೊಯ್ಯಲಾಯಿತು.

ಮೃತ ಚಾಲಕ ಬಿ.ಎಸ್. ಪಾಲಾಕ್ಷ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೊೈದೀನ್ ಷರೀಫ್ ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಇಂದಿನ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಮೃತರು ಹಾಗೂ ಗಾಯಾಳುಗಳ ಸಂಬಂಧಿಕರ ಸಹಿತ ರಾಜ್ಯ ಸಾರಿಗೆ ಸಂಸ್ಥೆ ಉದ್ಯೋಗಿಗಳು ಧಾವಿಸಿ ದುಃಖದುಮ್ಮಾನ ತೋಡಿಕೊಳ್ಳುತ್ತಿದ್ದ ಕರುಣಾಜನಕ ದೃಶ್ಯ ಆಸ್ಪತ್ರೆಯಲ್ಲಿ ಎದುರಾಯಿತು. ಜಿಲ್ಲಾ ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳೊಂದಿಗೆ ನಾಗರಿಕರು ಗಾಯಾಳುಗಳ ತುರ್ತು ಸೇವೆಯಲ್ಲಿ ತೊಡಗಿಸಿಕೊಂಡು ಮಾನವೀಯತೆ ಮೆರೆದರು.

ಕೆಎಸ್‍ಆರ್‍ಟಿಸಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾದ ಘಟನಾ ಸ್ಥಳಕ್ಕೆ ಸೋಮವಾರಪೇಟೆ ಡಿವೈಎಸ್‍ಪಿ ಮುರುಳೀಧರ್, ಸೋಮವಾರಪೇಟೆ ವೃತ್ತ ನಿರೀಕ್ಷಕರು, ಸುಂಟಿಕೊಪ್ಪ ಠಾಣಾ ಎ.ಎಸ್.ಐ ಗುಣಶೇಖರ್ ಹಾಗೂ ಸಿಬ್ಬಂದಿ ಆಗಮಿಸಿ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸುವಲ್ಲಿ ಖಾಸಗಿ ವಾಹನ ಹಾಗೂ ಆಟೋರಿಕ್ಷಾದಲ್ಲಿ ಸಾಗಿಸಿದರಲ್ಲದೆ. ಹೆದ್ದಾರಿ ಮಧ್ಯಭಾಗದಿಂದ ಬಸ್ಸುಗಳನ್ನು ತೆರವುಗೊಳಿಸಿ ಕಿ.ಮೀ. ಗಟ್ಟಲೆ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕಿ ಗೀತಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾ ಳುಗಳ ಆರೋಗ್ಯ ವಿಚಾರಿಸಿದರು.