ಕುಶಾಲನಗರ, ಫೆ. 8: ವಿಶ್ವವಿಖ್ಯಾತ ದುಬಾರೆ ಸಾಕಾನೆ ಶಿಬಿರದಲ್ಲಿ ಇದೀಗ ಆನೆಗಳ ನಿರ್ವಹಣೆ ದುಬಾರಿಯಾಗುವದರೊಂದಿಗೆ ಅರಣ್ಯ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ಇತ್ತೀಚಿನ ದಿನಗಳಲ್ಲಿ ಸ್ವಯಂಘೋಷಿತ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಗೊಳ್ಳುವದರೊಂದಿಗೆ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಶಿಬಿರಕ್ಕೆ ಲಗ್ಗೆಯಿಡುತ್ತಿದ್ದಾರೆ.

ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಲ್ಲಿ ಆನೆ ಮಾನವ ಸಂಘರ್ಷದ ಕಾರಣ ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆ ಮೂಲಕ ಕಾಡಿನಿಂದ ನಾಡಿಗೆ ಬಂದು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಪಳಗಿಸಿ ಸಲಹುತ್ತಾ ಬರಲಾಗುತ್ತಿದೆ. ಸಾಕಾನೆಗಳ ಸಂಖ್ಯೆ 30 ಕ್ಕೂ ಅಧಿಕವಾಗುತ್ತಿದ್ದ ಬೆನ್ನಲ್ಲೇ ಉತ್ತರ ಭಾರತದ ರಾಜ್ಯಗಳಿಗೆ ಕೆಲವು ಆನೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯೂ ನಡೆದಿದೆ.

ಪ್ರಸಕ್ತ ದುಬಾರೆ ಸಾಕಾನೆ ಶಿಬಿರದಲ್ಲಿ 28 ಸಾಕಾನೆಗಳು ಇದ್ದು ಇದರಲ್ಲಿ 3 ಆನೆಗಳನ್ನು ನೆರೆಯ ಆನೆಕಾಡು ಅರಣ್ಯದ ಶಿಬಿರದಲ್ಲಿ ಇರಿಸಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಶಿಬಿರದ ಅತಿ ಹೆಚ್ಚಿನ ಆನೆಗಳು ಪಾಲ್ಗೊಳ್ಳುತ್ತಿವೆ.

ಸರಕಾರದಿಂದ ಅಸಮರ್ಪಕ ಅನುದಾನ ಬಿಡುಗಡೆ, ಮಾವುತ ಕವಾಡಿಗರ ಅಭದ್ರತೆ ಈ ನಡುವೆ ಆನೆ ಮಾವುತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಶೀಥಲ ಸಮರ. ಈ ನಡುವೆ ರೋಸಿಹೋದ ಆನೆಗಳಿಂದ ಸಿಬ್ಬಂದಿಗಳ ಮೇಲೆ ಧಾಳಿ ಪ್ರಕರಣಗಳೂ ಕಂಡುಬಂದಿವೆ.

ಹಲವು ಕಾರಣಗಳಿಂದ ಸಾಕಾನೆಗಳು ತನ್ನ ಮಾವುತ ಸಿಬ್ಬಂದಿಗಳ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸಿದ್ದು ಇದರಿಂದ ಅಸಹನೆಗೊಂಡಿರುವ ಸಿಬ್ಬಂದಿಗಳು ಸಾಕಾನೆಗಳ ಆರೈಕೆ ಮಾಡುವಲ್ಲಿ ಬಹುತೇಕ ಹಿಂಜರಿಕೆ ಮಾಡುತ್ತಿರುವ ಬೆಳವಣಿಗೆಯೂ ಕಂಡುಬರುತ್ತಿವೆ.

ಮಾವುತ ಕಾವಾಡಿಗರು ದಿನದ 24 ಗಂಟೆ ಆನೆಗಳನ್ನು ನೋಡಿಕೊಳ್ಳುತ್ತಿದ್ದು ಈ ಸಂದರ್ಭ ಮರಿಯಾನೆಯೊಂದು ಇಬ್ಬರ ಮಾವುತರ ಹತ್ಯೆಗೆ ಕಾರಣವಾಗಿರುವ ನಡುವೆಯೇ ಕಳೆದ ಎರಡು ದಿನಗಳ ಹಿಂದೆ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಗೋಪಿ ಆಕಸ್ಮಿಕವಾಗಿ ತನ್ನ ಮಾವುತನನ್ನು ಘಾಸಿಗೊಳಿಸಿರುವದು. ಈ ಎಲ್ಲಾ ಬೆಳವಣಿಗೆ ನಡುವೆ ಹಿರಿಯ ಮಾವುತರುಗಳು ತಮ್ಮ ಆನೆಗಳ ಆರೈಕೆಗೆ ತಮ್ಮ ಕುಟುಂಬ ಸದಸ್ಯರನ್ನು ನೇಮಿಸಿಕೊಳ್ಳುವದು, ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಕೆಲವು ಆನೆ ಮಾವುತರ ನಿರ್ಲಕ್ಷ್ಯದೊಂದಿಗೆ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರ ಲಗ್ಗೆಯಿಂದ ಆನೆಗಳು ಕೆಲವೊಮ್ಮೆ ರೋಸಿಹೋಗುತ್ತಿರುವ ಬೆಳವಣಿಗೆಯೂ ನಡೆಯುತ್ತಿವೆ.

ಪ್ರವಾಸಿಗರ ನಿರ್ಭಂದಿತ ಶಿಬಿರಕ್ಕೆ ಪ್ರವಾಸಿಗರ ಲಗ್ಗೆಯಿಂದ ಒಂದು ಕಡೆ ಆನೆಗಳಿಗೆ ಕಿರಿಕಿರಿ ಉಂಟಾದರೆ ಇನ್ನೊಂದೆಡೆ ಸಿಬ್ಬಂದಿಗಳಿಗೂ ಅಸಹನೆ ಏರತೊಡಗುತ್ತಿರುವದು ಇದರ ನಡುವೆ ಆಗಾಗ್ಯೆ ಕೆಲವು ಅಹಿತಕರ ಘಟನೆಗಳು ಮರುಕಳಿಸುತ್ತಿವೆ. ಶಿಬಿರದಲ್ಲಿ ಕಾಡಿನಿಂದ ನಾಡಿಗೆ ಧಾಳಿ ಮಾಡುತ್ತಿರುವ ಆನೆಗಳನ್ನು ತಂದು ಪಳಗಿಸುತ್ತಿರುವ ಸಂದರ್ಭ ಕೂಡ ಸಾಕಾನೆಗಳನ್ನು ಬಳಸಲಾಗುತ್ತಿದೆ. ಸರಕಾರದ ಅಸಮರ್ಪಕ ಅನುದಾನ ಬಿಡುಗಡೆಯಿಂದ ಇಲಾಖೆಗೆ ಅವಶ್ಯವಿರುವ ಹಣದ ಕೊರತೆ ಕೂಡ ಈ ಶಿಬಿರದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಪರೋಕ್ಷ ಕಾರಣವಾಗುತ್ತಿದೆ ಎನ್ನುವದು ಕೆಲವರ ದೂರಾಗಿದೆ.

ದುಬಾರೆ ಸಾಕಾನೆ ಶಿಬಿರದ ಆನೆಗಳಿಗೆ ಬೇಕಾದ ಆಹಾರವನ್ನು ಇಲಾಖೆ ಖರೀದಿಸಿ ನೀಡುತ್ತಿದೆ. ಆದರೆ ನಿಧಾನಗತಿಯ ಹಣ ಬಿಡುಗಡೆ ಪ್ರಕ್ರಿಯೆಯಿಂದಾಗಿ ರೇಷನ್ ನೀಡಿದವರು ಕೂಡ ಹಣಕ್ಕಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಆದಾಯ ಕೂಡ ನೇರವಾಗಿ ಇಲಾಖೆಗೆ ಬರದೆ ಸರಕಾರಕ್ಕೆ ಸಲ್ಲುತ್ತದೆ. ಆನೆಗಳಿಗೆ ದಿನನಿತ್ಯ ಬೇಕಾಗುವ ಹಸಿರು ಸೊಪ್ಪುಗಳನ್ನು ಶಿಬಿರದ ಕಾಡಿನಿಂದಲೇ ತರಬೇಕಾದ ಹಿನ್ನಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಇಡೀ ಅರಣ್ಯದ ಕಾಡುಗಳ ಮರಗಳು ಬರಿದಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕೂಡಲೆ ಸರಕಾರ ಈ ಬಗ್ಗೆ ಚಿಂತನೆ ನಡೆಸಿ ದುಬಾರಿ ಎನಿಸಿರುವ ದುಬಾರೆ ಸಾಕಾನೆ ಶಿಬಿರಕ್ಕೆ ಕಾಯಕಲ್ಪ ನೀಡುವಲ್ಲಿ ಸಮರ್ಪಕ ಯೋಜನೆ ರೂಪಿಸಬೇಕಾಗಿದೆ.

ಕಳೆದ 15 ವರ್ಷಗಳ ಹಿಂದೆ ಶಿಬಿರದಲ್ಲಿದ್ದ ಬೆರಳೆಣಿಕೆಯ ಆನೆಗಳಿಗೆ ರೇಷನ್ ಬಾಪ್ತು ವಾರ್ಷಿಕ ಅಂದಾಜು 25 ಲಕ್ಷ ರೂ. ವೆಚ್ಚ ತಗುಲುತಿತ್ತು. ರಾಗಿಪುಡಿ, ಹುರುಳಿ, ಬೆಲ್ಲ, ಹರಳೆಣ್ಣೆ, ಬೇವಿನೆಣ್ಣೆ, ಉಪ್ಪು ಮುಂತಾದ ದಿನಸಿಗಳನ್ನು ದಿನಕ್ಕೆ ಎರಡು ಬಾರಿ ನೀಡಲಾಗುತ್ತಿತ್ತು. ಇದೀಗ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಕೂಡ ಅಧಿಕಗೊಂಡಿದೆ. ಆನೆಗಳ ಆಹಾರ ಪದ್ಧತಿಯನ್ನು ವೈದ್ಯರ ಸಲಹೆಯಂತೆ ಅರಣ್ಯ ಇಲಾಖೆ ಬದಲಾಯಿಸಿದ್ದು ಜೋಳದ ಪುಡಿ, ಕುಚಲಕ್ಕಿ, ಬೆಲ್ಲ, ಹುಲ್ಲು, ಭತ್ತ, ಉಪ್ಪು ವಿಶೇಷ ಸಂದರ್ಭದಲ್ಲಿ ಕೆಲವು ಆನೆಗಳಿಗೆ ಇನ್ನೂ ಹೆಚ್ಚಿನ ಪ್ರೋಟಿನ್‍ಯುಕ್ತ ಆಹಾರ ನೀಡಲು ವನ್ಯಜೀವಿ ತಜ್ಞರು ಶಿಫಾರಸು ಮಾಡಿದ್ದಾರೆ.

ಇದಲ್ಲದೆ 60 ಮಾವುತ ಕಾವಾಡಿಗ ಮತ್ತು ಆನೆ ಸಹಾಯಕರು ಶಿಬಿರದಲ್ಲಿ ದಿನದ 24 ಗಂಟೆ ಆನೆಗಳ ಆರೈಕೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಆನೆಗಳನ್ನು ಸ್ನಾನ ಮಾಡಿಸುವದು, ರೇಷನ್ ತಿನ್ನಿಸುವದು ನಂತರ ಕಾಡಿಗಟ್ಟಿ, ಕಾಡಿನಿಂದ ವಾಪಾಸ್ ಶಿಬಿರಕ್ಕೆ ತರವದು. ಇದು ಸಿಬ್ಬಂದಿಗಳ ದಿನನಿತ್ಯದ ಚಾಕರಿಯಾಗಿದೆ. ಇದರೊಂದಿಗೆ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಕಾಡಿನಿಂದ ನಾಡಿಗೆ ಲಗ್ಗೆಹಾಕುವ ಮದಗಜಗಳ ತರಬೇತಿ ಕೆಲಸ ಕೂಡ ಇದೇ ಮಾವುತ ಕವಾಡಿಗರದ್ದಾಗಿದೆ.

ಪ್ರಸಕ್ತ ಬೆಳಗ್ಗೆ 10 ಗಂಟೆಗೆ ಆನೆಗಳಿಗೆ ಆಹಾರ ತಿನ್ನಿಸುವದು ನಂತರ ಕಾಡಿಗೆ ಅಟ್ಟಿ ಸಂಜೆ 4.30 ಗಂಟೆಗೆ ಶಿಬಿರಕ್ಕೆ ವಾಪಾಸ್ ತರಲಾಗುತ್ತಿದೆ ಎಂದು ದುಬಾರೆ ಸಾಕಾನೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ಶಕ್ತಿ ಪ್ರತಿನಿಧಿಗೆ ತಿಳಿಸಿದ್ದಾರೆ. ಆನೆಗಳಿಗೆ ಕಾಡಿನಲ್ಲಿ ಬೇಕಾದ ಆಹಾರದ ಕೊರತೆಯುಂಟಾಗಿದ್ದು ಶಿಬಿರದಲ್ಲಿ ನೀಡುವ ಆಹಾರವೇ ಪ್ರಮುಖ ಆಹಾರವಾಗಿದೆ. ಪ್ರತಿ ಆನೆಗೆ ತಲಾ ಅರ್ಧ ಕೆಜಿಯಂತೆ ಜೋಳದ ಪುಡಿ, 2 ಕೆಜಿ ಕುಚಲಕ್ಕಿ, 1 ಅಚ್ಚು ಬೆಲ್ಲ, 6 ರಿಂದ 8 ಕೆಜಿ ಭತ್ತ, ಎರಡು ಕಂತೆ ಅಂದಾಜು 3 ಕೆಜಿಯಷ್ಟು ಹುಲ್ಲು ಮತ್ತು ಉಪ್ಪು ಸೇರಿಸಿ ಆನೆಗಳಿಗೆ ರೇಷನ್ ನೀಡಲಾಗುತ್ತಿದೆ. ದೇಹದಾಢ್ರ್ಯತೆ ಗಮನಿಸಿ ವನ್ಯಜೀವಿ ತಜ್ಞರ ಸಲಹೆಯಂತೆ ಕೆಲವು ಆನೆಗಳಿಗೆ ಹುರುಳಿ ಮತ್ತಿತರ ಪ್ರೊಟಿನ್‍ಯುಕ್ತ ರೇಷನ್ ನೀಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಧ್ಯ ತಿಂಗಳಿಗೆ ಆನೆಗಳಿಗೆ ಅಂದಾಜು 5 ರಿಂದ 6 ಲಕ್ಷ ರೂ. ಗಳಷ್ಟು ರೇಷನ್ ವೆಚ್ಚ ತಗಲುತ್ತದೆ. ಸಿಬ್ಬಂದಿಗಳ ತಿಂಗಳ ವೇತನ ಅಂದಾಜು 10 ಲಕ್ಷ ಸೇರಿದಂತೆ ಒಟ್ಟು ವಾರ್ಷಿಕ 1 ಕೋಟಿ ರೂ.ಗಳಿಗೂ ಮಿಕ್ಕಿ ವೆಚ್ಚವಾಗುತ್ತದೆ. ಆನೆಗಳಿಗೆ ಈ ಹಿಂದೆ ರೇಷನ್ ಸ್ಥಳೀಯ ಎಪಿಸಿಎಂಎಸ್ ಸಂಸ್ಥೆಯಿಂದ ಸರಬರಾಜಾಗುತ್ತಿತ್ತು. ಕೆಲವು ವರ್ಷಗಳಿಂದ ಇಲಾಖೆ ಆನ್‍ಲೈನ್ ಟೆಂಡರ್ ಮೂಲಕ ರೇಷನ್ ಖರೀದಿಸುತ್ತಿದ್ದು ಪ್ರಸಕ್ತ ಮೈಸೂರು ಖಾಸಗಿ ಸಂಸ್ಥೆಯೊಂದು ಆನೆಗಳಿಗೆ ಬೇಕಾದ ಆಹಾರಗಳನ್ನು ಪೂರೈಸುವ ಕಾರ್ಯ ನಡೆಸುತ್ತಿದೆ ಎಂಬ ಎಸಿಎಫ್ ಚಿಣ್ಣಪ್ಪ ತಿಳಿಸಿದ್ದಾರೆ. ಭತ್ತದ ಕಣಜಗಳು ಕಣ್ಮರೆಯಾಗುವ ನಡುವೆ ಹುಲ್ಲು ಕೆಲವೊಮ್ಮೆ ಲಭ್ಯವಿಲ್ಲದ ಸಂದರ್ಭ ಪೂರೈಕೆದಾರರು ಬದಲೀ ವ್ಯವಸ್ಥೆಗೆ ಮೊರೆ ಹೋಗಬೇಕಾಗಿದೆ.

ಪ್ರಸಕ್ತ ದುಬಾರೆ ಸಾಕಾನೆ ಶಿಬಿರದಲ್ಲಿ ಉತ್ತರ ರಾಜ್ಯಗಳಿಗೆ ಸ್ತಳಾಂತರಿಸಿದ ಆನೆಗಳನ್ನು ಹೊರತುಪಡಿಸಿ 28 ಆನೆಗಳು ಇವೆ. ಇದರಲ್ಲಿ ಮೂರು ಸಾಕಾನೆಗಳು ಅತ್ತೂರು ಅರಣ್ಯ ಶಿಬಿರದಲ್ಲಿ ಕೆಲಸ ನಿರ್ವಹಿಸುತ್ತಿವೆ. ಸಾಕಾನೆಗಳನ್ನು ಅನಾರೋಗ್ಯ ಸಂದರ್ಭ ಪರಿಶೀಲನೆಗೆ ವನ್ಯಜೀವಿ ತಜ್ಞರ ಕೊರತೆ ಇಲ್ಲಿ ಕಾಣಬಹುದು. ಶಿಬಿರಕ್ಕೆ ಹುಣಸೂರು ವಲಯದಿಂದ ತಜ್ಞ ವೈದ್ಯರು ಭೇಟಿ ನೀಡಬೇಕಾಗಿದ್ದು ಇತರ ವನ್ಯಜೀವಿಗಳ ಆರೋಗ್ಯದ ಬಗ್ಗೆಯೂ ಇದೇ ವೈದ್ಯರು ಪರಿಶೀಲನೆ ಮಾಡಬೇಕಾಗುತ್ತದೆ. ಆನೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ ಕೂಡ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದು ಇರುವ ಏಕೈಕ ತಜ್ಞರೊಬ್ಬರು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿರುವದು ಕಾಣಬಹುದು.

ವರದಿ: ಚಂದ್ರಮೋಹನ್