*ಗೋಣಿಕೊಪ್ಪಲು, ಫೆ. 8: ಹಾತೂರು ಗ್ರಾ.ಪಂ. ಸಮೀಪ ಇರುವ ಹೈವೆ ಕ್ಯಾಂಟೀನ್ ನಾಮಫಲಕದ ದಿನಸಿ ಅಂಗಡಿ ಹಾಗೂ ಟೀ ಕ್ಯಾಂಟೀನ್‍ಗೆ ಸೀಮೆ ಎಣ್ಣೆ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಸುಮಾರು 40 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರಾದ ತೆರೆಸಾ ಪೆÇಲೀಸ್ ದೂರು ನೀಡಿದ್ದಾರೆ.
ಬುಧವಾರ ರಾತ್ರಿ 8:45ಕ್ಕೆ ಅಂಗಡಿ ಮುಚ್ಚಿ ಮನೆಗೆ ತೆರೆಳಿದ್ದರು. ಈ ಸಂದರ್ಭವನ್ನೇ ಕಾದು ಕುಳಿತ ಕಿಡಿಗೇಡಿಗಳು ರಾತ್ರಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಅಂಗಡಿ ಸಮೀಪ ಇರುವ ಕಟ್ಟಡದ ಮಾಲೀಕ ಬೆಂಕಿಯನ್ನು ಕಂಡು ಘಟನೆಯ ಬಗ್ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದು ನೋಡಿದಾಗ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಂಗಡಿಯಲ್ಲಿದ್ದ 5 ಸಾವಿರ ರೂಪಾಯಿ ನಗದು, ಪಾನೀಯ ಬಾಟಲಿಗಳು, ಸಿಹಿ ತಿನಿಸುಗಳು, ತರಕಾರಿ, ಹಣ್ಣುಗಳು, ಮರದ ಪೀಠೋಪಕರಣಗಳು, ನೆಲಹಾಸು ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಸುಟ್ಟು ಹೋಗಿವೆ. ಸುಮಾರು 40 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತೆರೆಸಾ ಅವರ ಪತಿ ವಿಕ್ಟರ್ ಮೆನೇಜಸ್ ತಿಳಿಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.