ಮಡಿಕೇರಿ, ಫೆ. 8: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಕಾಲೇಜಿನಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿ ಸುಮಂತ್ ಮಾತನಾಡಿ, 2007ರಲ್ಲಿ ಕಾಲೇಜು ಆರಂಭ ವಾದರೂ ಇನ್ನೂ ಸ್ವಂತ ಕಟ್ಟಡ ಇಲ್ಲದೇ ವಿದ್ಯಾರ್ಥಿಗಳಿಗೆ ಸಮಸ್ಯೆ ಯಾಗಿದೆ. ಈ ಬಗ್ಗೆ ಸ್ಥಳಿಯ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿ ಯವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಕಾಲೇಜಿನಲ್ಲಿ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಪಡೆಯುತ್ತಿದ್ದು, ಇವರಲ್ಲಿ ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ದೂರದ ಕಾಲೂರು, ಮಾದಾಪುರ, ಮಕ್ಕಂದೂರು, ಚೆಟ್ಟಳ್ಳಿ, ಮದೆನಾಡು ಮತ್ತಿತರ ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾರೆ. ಕಾಲೇಜಿಗೆ ಪ್ರತ್ಯೇಕ ಕಟ್ಟಡ, ಆಟದ ಮೈದಾನ, ಗ್ರಂಥಾಲಯ, ಶೌಚಾಲಯ ಮೂಲ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಓದಲು ಉತ್ತಮ ವಾತಾವರಣ ಸಿಗುತ್ತಿಲ್ಲ. ಆದ್ದರಿಂದ ಕಾಲೇಜಿಗೆ ಕೂಡಲೇ ಉತ್ತಮ ನಿವೇಶನ ಮಂಜೂರು ಮಾಡಬೇಕು ಎಂದು ಸುಮಂತ್ ಒತ್ತಾಯಿಸಿದರು.

ವಿದ್ಯಾರ್ಥಿ ಕವನ್ ಕುಮಾರ್ ಮಾತನಾಡಿ, 2012ರಲ್ಲಿ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲು ರೂ. 2 ಕೋಟಿ ಹಣ ಬಂದಿರುತ್ತದೆ. ಈ ಸಂಬಂಧ ಕರ್ಣಂಗೇರಿ ಗ್ರಾಮದಲ್ಲಿ ಸರ್ಕಾರ ಗುರುತ್ತಿಸಿರುವ ಜಾಗ ನಗರದಿಂದ ಸಾಕಷ್ಟು ದೂರ ಇರುವುದರಿಂದ ನಗರಕ್ಕೆ ಹತ್ತಿರ ಇರುವಲ್ಲಿ ಕಾಲೇಜಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಎಚ್ಚರ: 10 ವರ್ಷಗಳಿಂದ ಕಾಲೇಜಿಗೆ ಸೌಲಭ್ಯ ನೀಡದ ಹಿನ್ನಲೆ, ಮುಂದಿನ ದಿನದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ವಿವಿಧ ಸಂಘ ಸಂಸ್ಥೆಗಳು ಜೊತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ವಿದ್ಯಾರ್ಥಿ ಕವನ್ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿ ಗಳಾದ ಲಿಖಿತ, ಎಂ.ಸಿ. ರೇಣುಕ, ಎನ್.ಬಿ. ಪ್ರವೀಣ, ಪ್ರಮೋದ್ ಪಾಲ್ಗೊಂಡಿದ್ದರು.