ಸಿದ್ದಾಪುರ, ಫೆ. 7: ವಿಶ್ವದಾದ್ಯಂತ ಸಂಗೀತ ಲೋಕದಲ್ಲಿ ಛಾಪು ಮೂಡಿಸಿರುವ ಉಸ್ತಾದ್ ಹಫೀಜ್ ಬಲೆ ಖಾನ್ ಹಾಗೂ ತಂಡದವರಿಂದ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ 30 ಮಂದಿಯಿಂದ ಏಕಕಾಲದಲ್ಲಿ ಸಿತಾರ್ ವಾದನ ನಡೆಯಲಿದೆ.

ಗುಹ್ಯ ಗ್ರಾಮದ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಬಾರಿ ಸಂಗೀತ ಮಾಂತ್ರಿಕ ಉಸ್ತಾದ್ ಹಫೀಜ್ ಬಲೆ ಖಾನ್‍ರವರ ಸಿತಾರ್ ವಾದನ ವಿಶೇಷವಾಗಿದೆ. ಒಟ್ಟು 30 ಮಂದಿ ಕಲಾವಿದರು ಏಕಕಾಲದಲ್ಲಿ ಸಿತಾರ್ ನುಡಿಸಲಿದ್ದು, ಕೊಡಗು ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಈ ಕಾರ್ಯಕ್ರಮ ತಾ. 13 ರಂದು ನಡೆಯಲಿದೆ.

ಉಸ್ತಾದ್ ಹಫೀಜ್ ಬಾಲೆ ಖಾನ್‍ರವರು ಅಮೇರಿಕಾ, ಕುವೈತ್, ಲಂಡನ್ ಸೇರಿದಂತೆ ವಿಶ್ವದ ಹಾಗೂ ದೇಶದ ವಿವಿಧ ಭಾಗದಲ್ಲಿ ತಮ್ಮ ನಾದಸುಧೆಯನ್ನು ಹರಿಸಿದ್ದು, ಜನಮನ್ನಣೆ ಗಳಿಸಿದ್ದಾರೆ. ಸಾಧಕ ಶಿವ ಪ್ರಶಸ್ತಿ, ಗುರುಗಂಗಾಧರ್ ಪ್ರಧಾನ ಸ್ಮರಣಾರ್ಥ ಪ್ರಶಸ್ತಿ, ಕೇಂದ್ರ ಹೆ.ಆರ್.ಡಿ ಸಚಿವಾಲಯದ ಯುವ ಕಲಾವಿದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರು ಖ್ಯಾತ ಸಿತಾರ್‍ವಾದಕ ಧಾರವಾಡದ ಕಿರಾನಾ ಘರಾನಾದ ದಿವಂಗತ ಉಸ್ತಾದ್ ನವಾಜ್ ಬಲೆ ಖಾನ್ ಅವರ ಪುತ್ರರಾಗಿದ್ದು, 30 ಮಂದಿ ಸಿತಾರ್ ವಾದಕರ ತಂಡದೊಂದಿಗೆ ಶಿವನಾಮ ಸ್ಮರಣೆಗಳು, ಪುರಂದರದಾಸರ ಕೀರ್ತನೆಗಳು ಸೇರಿದಂತೆ ಭಕ್ತಿ ಕೀರ್ತನೆಗಳನ್ನು ಸಿತಾರ್ ವಾದನದಿಂದ ನುಡಿಸಲಿದ್ದಾರೆ. ಸಿದ್ದಾಪುರದ ಅಜ್ಜಿಕುಟ್ಟೀರ ಸುಬ್ಬಯ್ಯ ಅವರ ಪುತ್ರಿ ರೋಶಿಣಿ ಸುಬ್ಬಯ್ಯ ಅವರು ಕೂಡ ಕಳೆದ 6 ವರ್ಷಗಳಿಂದ ಈ ತಂಡದಲ್ಲಿರುವದು ವಿಶೇಷವಾಗಿದೆ.

ತಾ. 13 ರ ಶಿವರಾತ್ರಿಯಂದು ಇತಿಹಾಸ ಪ್ರಸಿದ್ಧ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಸಂಜೆ 6 ಗಂಟೆಯಿಂದ ಉಸ್ತಾದ್ ಹಫೀಜ್ ಬಲೆ ಖಾನ್ ಅವರ ಸಿತಾರ ಸುಧೆ ಹರಿಯಬರಲಿದೆ. ಶಿವರಾತ್ರಿಯ ದಿನದಂದು ದೇವಾಲಯದಲ್ಲಿ ಗಣಪತಿ ಹೋಮ, ರುದ್ರಹೋಮ, ಮಹಾಪೂಜೆ, ಶ್ರೀ ಏಕಾದಶಿ ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಶಿವರಾತ್ರಿಯ ಅಂಗವಾಗಿ ಭಕ್ತಾದಿ ಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

- ಎ.ಎನ್. ವಾಸು