ಸಂಕೇತ್ ಭರವಸೆ

ಭಾಗಮಂಡಲ, ಫೆ. 7: ಜೆ.ಡಿ.ಎಸ್. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕಾಡಾನೆ ಧಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡಲು ಕಟಿಬದ್ಧವಾಗಿದ್ದು, ಪಕ್ಷದ ಅಧ್ಯಕ್ಷ ಮಾಜಿ ಸಿ.ಎಂ. ಕುಮಾರಸ್ವಾಮಿ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದರು. ಭಾಗಮಂಡಲದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಮಾರಸ್ವಾಮಿ ಜನಪರ ಕೆಲಸ ಮಾಡುತ್ತಿದ್ದು ಜನರ ಒಲವು ಜೆಡಿಎಸ್ ಪರವಾಗಿದೆ. ಕ್ಷೇತ್ರ ವಿಂಗಡಣೆ ಯಿಂದಾಗಿ ವೀರಾಜಪೇಟೆ ಕ್ಷೇತ್ರವು ದೊಡ್ಡದಾಗಿದ್ದು ಭಾಗಮಂಡಲ ಹೋಬಳಿಯಲ್ಲಿ ಬಹಳಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ಸದನದಲ್ಲಿ ಮಾತನಾಡದಿರುವ ಬಗ್ಗೆ ಜಿಲ್ಲೆಯ ಶಾಸಕರ ಬಗ್ಗೆ ಹರಿಹಾಯ್ದರು. ಜೆಲ್ಲೆಯ ಮೂಲೆ ಮೂಲೆಗಳಿಗೆ ಜಾತ್ಯತೀತ ಜನತಾದಳದ ಕಾರ್ಯಕರ್ತರು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಲಿದೆ ಎಂದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹೊಸೂರು ಸತೀಶ್ ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲೆಯ ಜನತೆ ಹಲವು ಹೋರಾಟ ಹಾಗೂ ಪ್ರತಿಭಟನೆ ನಡೆಸಿದರೂ ಸ್ಪಂದಿಸಲಿಲ್ಲ. ಜನತಾ ದರ್ಶನ ಎಂಬ ಕಾರ್ಯಕ್ರಮವನ್ನು ಕುಮಾರಸ್ವಾಮಿ ಆಯೋಜಿಸಿ ಅದೆಷ್ಟೋ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.

ಜಿ.ಪಂ. ಮಾಜಿ ಸದಸ್ಯ ರಾಜಾರಾವ್ ಮಾತನಾಡಿ, ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಕಮಿಷನ್‍ಗಾಗಿ ವಿವಿಧ ಭಾಗ್ಯಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ದೂರಿದರು. ಸಭೆಯ ಅಧ್ಯಕ್ಷತೆಯನ್ನು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಣತ್ತಲೆ ವಿಶ್ವನಾಥ್ ವಹಿಸಿದ್ದರು.

ಸಭೆಯಲ್ಲಿ ತಾ.ಪಂ. ಸದಸ್ಯೆ ಸಂಧ್ಯಾ, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ರಾಜ್ಯ ಮುಖಂಡ ಮನ್ಸೂರ್ ಆಲಿ, ಜೆಡಿಎಸ್ ಹಿಂದುಳಿದ ಜಿಲ್ಲಾ ಘಟಕದ ಅಧ್ಯಕ್ಷ ಶಿವದಾಸ್, ವೀರಾಜಪೇಟೆ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಮತೀನ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್, ಯುವ ಘಟಕದ ಜಿಲ್ಲಾ ಉಸ್ತುವಾರಿ ರಾಜೇಶ್ ಎಲ್ಲಪ್ಪ, ಜಿಲ್ಲಾಧ್ಯಕ್ಷ ಅಮ್ಮಂಡ ವಿವೇಕ್, ಅಯ್ಯಂಗೇರಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ, ಜಾಸಿರ್, ವಿಶ್ವ, ರಘುರಾಂ ಕರಿಕೆ, ಜಯಪ್ರಕಾಶ್ ಕುಂದಚೇರಿ, ಜಯದೀಪ್, ಐಸಾಕ್ ಖಾನ್, ನಂಜುಂಡಪ್ಪ, ಐದು ಗ್ರಾಮಗಳ ಜೆಡಿಎಸ್ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.