ಮಡಿಕೇರಿ, ಫೆ. 7: ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳೋದಯ ಮಹಿಳಾ ಒಕ್ಕೂಟ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟಗಳ ಸಂಯುಕ್ತ್ತ ಆಶ್ರಯದಲ್ಲಿ ತಾ. 9 ರಂದು 2017-18ನೇ ಸಾಲಿನ ಕೊಡಗು ಜಿಲ್ಲಾ ಯುವ ಸಮಾವೇಶ, ಯುವ ಸಮ್ಮೇಳನ, ಕಾರ್ಯಾಗಾರ, ತರಬೇತಿ ಯುವ ಕೃತಿ ಪ್ರದರ್ಶನ ಹಾಗೂ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ. ಹರೀಶ್ ತಾ. 9 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತ್ತುವಾರಿ ಸಚಿವ ಎಂ.ಆರ್. ಸೀತಾರಾಂ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಮಾತನಾಡಿ, ಸಮಾರಂಭದಲ್ಲಿ ನೆಹರು ಯುವ ಸಂಘ ಪ್ರಶಸ್ತಿಯನ್ನು ತಾಳತ್ತಮನೆಯ ನೇತಾಜಿ ಯುವತಿ ಮಂಡಳಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 25 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆಂದು ಮಾಹಿತಿಯಿತ್ತರು. ಇದರೊಂದಿಗೆ ಯುವ ಸಬಲೀಕರಣ ಇಲಾಖೆಯ ವತಿಯಿಂದ ಯುವಕ ಮತ್ತು ಯುವತಿ ಸಂಘ ಪ್ರಶಸ್ತಿ ನೀಡಲಾಗುತ್ತದೆ. ಈ 2 ಪ್ರಶಸ್ತಿ ತಲಾ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ. ಅಲ್ಲದೆ, ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಐವರಿಗೆ ವೈಯಕ್ತಿಕ ಪ್ರಶಸ್ತಿಯನ್ನು ನೀಡಲಾಗುವದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಸೋಮವಾರ ಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಶೋಭರಾಜ್, ಜಿಲ್ಲಾ ಕಾರ್ಯ ದರ್ಶಿ ಇಂದುಮತಿ ರವೀಂದ್ರ, ಜಿಲ್ಲಾ ಖಜಾಂಚಿ ರಾಣಿ ಅಯ್ಯಪ್ಪ, ಯುವ ಒಕ್ಕೂಟದ ಸದಸ್ಯರಾದ ಕೆ.ಕೆ. ಗಣೇಶ್ ಉಪಸ್ಥಿತರಿದ್ದರು.