ಸಿದ್ದಾಪುರ: ಫೆ.6 ರಹದಾರಿ ಪಡೆದು ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಚಾಲಕನಿಂದ ಮಧ್ಯರಾತ್ರಿ ನಾಲ್ವರು ಹಣ ದೋಚಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಕುಶಾಲನಗರದ ಮರ ಮಿಲ್ಲ್ ಮಾಲೀಕರಿಗೆ ಸೇರಿದ ಲಾರಿಯಲ್ಲಿ ಕೇರಳದ ಮಾನಂದವಾಡಿಯಿಂದ ರಹದಾರಿ ಪಡೆದು ನಾಟಾಗಳನ್ನು ತರುತ್ತಿರುವ ಸಂದರ್ಭ ಪಾಲಿಬೆಟ್ಟ ಪಟ್ಟಣ ಸಮೀಪ ನಾಲ್ವರು ಮಾರುತಿ ಓಮಿನಿ ವ್ಯಾನಿನಲ್ಲಿ ಆಗಮಿಸಿದರು ಎನ್ನಲಾಗಿದೆ. ಬಳಿಕ ಲಾರಿಯನ್ನು ಅಡ್ಡಗಟ್ಟಿ ತಾವು ಅರಣ್ಯ ಇಲಾಖೆಯ ಸಿಬ್ಬಂದಿ ಎಂದು ಹೇಳಿಕೊಂಡು ಲಾರಿ ಚಾಲಕನನ್ನು ಬೆದರಿಸಿ ರೂ. 10 ಸಾವಿರ ನೀಡುವಂತೆ ಬೆದರಿಕೆ ಹಾಕಿದರೆನ್ನಲಾಗಿದೆ. ಅಲ್ಲದೆ ಲಾರಿಯ ಮಾಲೀಕರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಹಾಗೂ ಲಾರಿ ಚಾಲಕನ ಜೇಬಿನಲ್ಲಿದ್ದ ರೂ. 9,870 ನಗದು ಹಣವನ್ನು ಕಿತ್ತು ನಾಲ್ವರು ಪರಾರಿಯಾಗಿದ್ದಾರೆ. ಈ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಲಾರಿ ಚಾಲಕ ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.