ಮಡಿಕೇರಿ, ಫೆ. 6: ಪಡೆದ ಸಾಲಕ್ಕೆ ನೀಡಿದ್ದ ಚೆಕ್ ಬೌನ್ಸ್ ಆದ ಹಿನ್ನೆಲೆ ನ್ಯಾಯಾಲಯ ದಂಡ ವಿಧಿಸಿದೆ.

ಇಬ್ನಿವಳವಾಡಿ ಗ್ರಾಮದ ಎ.ಎಸ್. ಉತ್ತಪ್ಪ ಅವರಿಂದ ನಗರದ ಮಂಗಳೂರು ರಸ್ತೆಯ ಅಭಿಷೇಕ್ ಎಂಬವರು 1.80 ಲಕ್ಷ ಸಾಲ ಪಡೆದು ಚೆಕ್ ನೀಡಿದ್ದರು. ಚೆಕ್ ಬ್ಯಾಂಕ್‍ನಿಂದ ಹಿಂತಿರುಗಿದ ಸಂಬಂಧ ನಗರದ ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಶರ್ಮಿಳಾ ಕಾಮತ್ ಅವರು ಆರೋಪಿಗೆ ದಂಡ ವಿಧಿಸಿದ್ದಾರೆ.

1.80 ಲಕ್ಷದಲ್ಲಿ ಆರೋಪಿ ಈಗಾಗಲೇ 30 ಸಾವಿರ ಪಾವತಿಸಿದ್ದು, ಉಳಿಕೆ 1.5 ಲಕ್ಷಕ್ಕೆ 18 ಸಾವಿರ ಹೆಚ್ಚುವರಿ ಪಾವತಿಸುವಂತೆಯೂ, 10 ಸಾವಿರ ರಾಜ್ಯದ ಬೊಕ್ಕಸಕ್ಕೆ ನೀಡುವಂತೆಯೂ ಆದೇಶಿಸಲಾಗಿದೆ. ಹಣ ಪಾವತಿ ಮಾಡಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ. ಅರ್ಜಿದಾರರ ಪರ ಕೆ.ಎ. ಕೀರ್ತಿರಾಜ್‍ಕುಮಾರ್ ವಾದಿಸಿದ್ದರು.