ಮಡಿಕೇರಿ, ಫೆ. 5: ಇಲ್ಲಿನ ಸ್ಟೀವರ್ಟ್ ಹಿಲ್ ಪ್ರದೇಶದಲ್ಲಿ ದಶಕಗಳ ಹಿಂದಿನ ರೈಲ್ವೇ ಮೈಕ್ರೋವೇವ್ ಕೇಂದ್ರವಿದ್ದ ಸ್ಥಳದಲ್ಲಿ, 2012ರಲ್ಲಿ ನೈರುತ್ವ ರೈಲ್ವೇ ಅತಿಥಿಗೃಹ ನಿರ್ಮಾಣ ಸಂದರ್ಭ ಆಕ್ಷೇಪದೊಂದಿಗೆ ಕಾಮಗಾರಿ ತಡೆಹಿಡಿದಿದ್ದ ಮಾಜೀ ಸಚಿವ ಯಂ.ಸಿ. ನಾಣಯ್ಯ ಅವರು ಇದೀಗ ಮತ್ತೆ ಚಾಲನೆಗೊಂಡಿರುವ ಕೆಲಸವನ್ನು ಆಕ್ಷೇಪಿಸಿ ಈ ಯೋಜನೆಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.ಮಾಜೀ ಸಚಿವರು ಜಿಲ್ಲಾಧಿಕಾರಿ ಅವರಿಗೆ ಬರೆದಿರುವ ಪತ್ರದಲ್ಲಿ; ಮಡಿಕೇರಿ ನಗರ ವ್ಯಾಪ್ತಿಯ ಸ್ಟೀವರ್ಟ್‍ಹಿಲ್ ಪ್ರದೇಶದಲ್ಲಿ ಭಾರತದ ರೈಲ್ವೇ ಮಂಡಳಿ ಕಾನೂನು ಬಾಹಿರ ಹಾಗೂ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವದಾಗಿ ಆರೋಪಿಸಿದ್ದು, ತಾ.2ರ ‘ಶಕ್ತಿ’ ವರದಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯಂ.ಸಿ. ನಾಣಯ್ಯ ಅವರ ಪತ್ರದ ಸಾರಾಂಶ ಈ ಕೆಳಗಿನಂತಿದೆ;

‘‘ಈ ಪ್ರದೇಶದಲ್ಲಿ ರೈಲ್ವೇ ಮೈಕ್ರೋವೇವ್ ಟವರನ್ನು ನಿರ್ಮಾಣ ಮಾಡಲಿಕ್ಕೋಸ್ಕರ ಮಾತ್ರ ಜಿಲ್ಲಾಡಳಿತ ಅನುಮತಿ ಕೊಟ್ಟಿರುವದು ಮತ್ತು ಈ ರೈಲ್ವೇ ಮೈಕ್ರೋವೇವ್ ಟವರನ್ನು 2010ರಲ್ಲಿ ಕರ್ನಾಟಕ

(ಮೊದಲ ಪುಟದಿಂದ) ಮತ್ತು ತಮಿಳುನಾಡಿನ ಪ್ರದೇಶಕ್ಕೆ ವರ್ಗಾಯಿಸಿರುವದು, ವರ್ಗಾಯಿಸಿದ ಮೇಲೆ ಈ ರೈಲ್ವೇ ಮೈಕ್ರೋವೇವ್ ಟವರನ್ನು ಡಿಸ್‍ಮ್ಯಾಂಟಲ್ ಮಾಡಿ ಆದ ಮೇಲೆ ಈ ಜಾಗಕ್ಕೆ ಜಿಲ್ಲಾಡಳಿತ ನೀಡಿದ ಮಂಜೂರಾತಿಯನ್ನು ಕೂಡಲೇ ರದ್ದುಪಡಿಸಿ ಸರ್ಕಾರವು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಈ ಹಿಂದೆ ಕೋರಿದ್ದೆ. ಆ ಮೇರೆಗೆ ಅಂದಿನ ಜಿಲ್ಲಾಧಿಕಾರಿಗಳು 9.3.2012ರ ಪತ್ರದಲ್ಲಿ ಜನರಲ್ ಮ್ಯಾನೇಜರ್ ರೈಲ್ವೇ ಇಲಾಖೆ, ಮೈಸೂರು- ಇವರಿಗೆ ಪತ್ರ ಬರೆದು ಅವರಿಂದ ಮಾಹಿತಿಗಳನ್ನು ಪಡೆದು ನನ್ನ ಪತ್ರದಲ್ಲಿ ಸೂಚಿಸಿದಂತೆ ಸ್ಥಳವನ್ನು ಸರ್ಕಾರಕ್ಕೆ ವರ್ಗಾಯಿಸಿಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುವದು ಎಂದು ಉಲ್ಲೇಖಿಸಿದ್ದರು.

ಈ ಹಿನ್ನೆಲೆ ರೈಲ್ವೇ ಇಲಾಖೆಯವರು ಈ ಪ್ರದೇಶದಲ್ಲಿ ಕಟ್ಟಲು ಯೋಜಿಸಿರುವ ಅತಿಥಿ ಗೃಹವನ್ನು ಕೈಬಿಡಲಾಯಿತು. ಸುಮಾರು 5 ವರ್ಷಗಳು ಕಳೆದಾದ ಮೇಲೆ ಕೆಲವು ದಿವಸಗಳ ಹಿಂದೆ ಇದೇ ಪ್ರದೇಶದಲ್ಲಿ ನೈರುತ್ಯ ರೈಲ್ವೇ ಯೋಜನೆಯ ಕಚೇರಿ ಎಂಬ ನಾಮಫಲಕವನ್ನು ಹಾಕಿ ಈ ಸ್ಥಳದಲ್ಲಿ ಗುಂಡಿಗಳನ್ನು ತೆಗೆದು ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿರುವದರ ಬಗ್ಗೆ ‘ಶಕ್ತಿ’ ದಿನಪತ್ರಿಕೆಯ ದಿನಾಂಕ 2ರಂದು ವರದಿಯನ್ನು ಪ್ರಕಟಿಸಲಾಗಿದೆ.

ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ಸ್ಟೀವರ್ಟ್ ಹಿಲ್ ಪ್ರದೇಶವು ‘ಸಿ.ಡಿ.ಪಿ.’ ತೆರೆದ ಪ್ರದೇಶವೆಂದು ಘೋಷಿಸಿರುವದು ಸ್ಪಷ್ಟವಾಗಿದ್ದರೂ ಕೂಡ ಈ ಹಿಂದಿನ ಯೋಜನೆಯ ಪ್ರಕಾರ ಅತಿಥಿ ಗೃಹವನ್ನು ಕಟ್ಟಲಿಕ್ಕೋಸ್ಕರ ಈ ಪ್ರದೇಶವನ್ನು ಅನಧಿಕೃತವಾಗಿ ಬಳಸಲು ಪ್ರಾರಂಭ ಮಾಡಿರುವದು ಮತ್ತು ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರದ ‘ಮೂಡಾ’ ಹಾಗೂ ನಗರಸಭೆಗಳ ಅರಿವಿಗೆ ತಾರದೆ ಈ ಪ್ರದೇಶದಲ್ಲಿ ನೈರುತ್ಯ ರೈಲ್ವೇ ಕಚೇರಿಯ ಕಾಮಗಾರಿ ಎಂಬ ನಾಮಫಲಕವನ್ನು ಸುಳ್ಳಾಗಿ ಹಾಕಿರುವದು ಕಾನೂನು ಬಾಹಿರವಲ್ಲದೆ ಮಡಿಕೇರಿ ಸಿ.ಡಿ.ಪಿ.ಯ ತೆರೆದ ಪ್ರದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ಮೇಲಿನ ಕಾರಣಗಳಿಂದ ರೈಲ್ವೇ ಇಲಾಖೆಯ ಅಧಿಕಾರಿಗಳ ಅತಿಥಿಗೃಹ ಎಂಬ ಐಷಾರಾಮಿ ಜೀವನದ ಮೋಜಿನ ಪ್ರದೇಶ ಆಗಲು ಖಂಡಿತ ಬಿಡಬಾರದಾಗಿಯೂ ಮತ್ತು ಈ ಪ್ರದೇಶವನ್ನು ಹಾಗೂ ನಗರದ ನಾಲ್ಕು ದಿಕ್ಕುಗಳಲ್ಲಿ ಆವರಿಸಿರುವ ಗಿರಿಕಂದರಗಳನ್ನು, ಬೆಟ್ಟ- ಗುಡ್ಡಗಳನ್ನು ಮಡಿಕೇರಿ ನಗರದ ಸಿ.ಡಿ.ಪಿ.ಯಲ್ಲಿ ತೆರೆದ ಪ್ರದೇಶ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ತಾವು ಎಲ್ಲಾ ಪ್ರದೇಶಗಳ ರಕ್ಷಣೆಗೆ ಈ ಕೂಡಲೇ ಕ್ರಮಕೈಗೊಳ್ಳಬೇಕಿದೆ. ಅಲ್ಲದೆ ಇಲ್ಲಿ ನಡೆಯುತ್ತಿದೆ ಎನ್ನಲಾದ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಿರುವದಾಗಿಯೂ ಮತ್ತು ಈ ಹಿಂದೆ ರೈಲ್ವೇ ಮೈಕ್ರೋವೇವ್ ಟವರ್‍ಗಾಗಿ ಮಾತ್ರ ಸೀಮಿತವಾಗಿ ಮಂಜೂರಾತಿ ಮಾಡಿದ ಈ ಪ್ರದೇಶವನ್ನು ಕೂಡಲೇ ರದ್ದುಪಡಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕಾಗಿಯೂ ತಮ್ಮನ್ನು ಈ ಮೂಲಕ ಕೋರುತ್ತೇನೆ.’’