ಕುಶಾಲನಗರ, ಫೆ. 6: ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗನೊಬ್ಬ ಅಪಹರಣ ಕ್ಕೊಳಗಾಗಿದ್ದಾನೆ ಎಂದು ಆತನ ಸ್ನೇಹಿತರೆ ಪೊಲೀಸ್ ದೂರು ನೀಡಿ, ಪೊಲೀಸರು ತನಿಖೆ ಕೈಗೊಂಡ ಸಂದರ್ಭ ಅದು ಸುಳ್ಳು ಪುಕಾರು ಎಂಬದು ಪತ್ತೆಯಾಗಿದ್ದು, ಐವರ ಮೇಲೆ ಪ್ರಕರಣ ದಾಖಲಾಗಿದೆ.ತಾ. 3 ರಂದು ಗುಲ್ಬರ್ಗ ಜಿಲ್ಲೆಯ ಕಿರಿಕೋಟ ಗ್ರಾಮದ ಕೈಲಾಸ್ ಎಂಬವನನ್ನು ನಾಲ್ವರು ಕಾರೊಂದರಲ್ಲಿ ಅಪಹರಿಸಿರುವದಾಗಿ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಲ್ಕು ದಿನಗಳ ಕಾಲ ವಿವಿಧೆಡೆ ಪ್ರವಾಸ ಕೈಗೊಂಡ ಕುರಿಕೋಟ ಗ್ರಾಮದ ಕೈಲಾಸ್, ಗಣೇಶ, ಶಿವಲಿಂಗ, ಸಿದ್ದಪ್ಪ, ಬಾಬುರಾವ್ ಮತ್ತು ಆನಂದ ತಾ. 3 ರಂದು ಕುಶಾಲನಗರ ಮೈಸೂರು ರಸ್ತೆಯ ಲಾಡ್ಜ್ ಒಂದರಲ್ಲಿ ತಂಗಿದ್ದರು. ರಾತ್ರಿ 10 ಗಂಟೆ ವೇಳೆಗೆ ಊಟ ಮುಗಿಸಿ ಲಾಡ್ಜ್‍ಗೆ ಹಿಂದಿರುಗುವ ಸಂದರ್ಭ ಕೈಲಾಸ್‍ನನ್ನು ಇನ್ನೋವಾ ಕಾರೊಂದರಲ್ಲಿ ಅಪಹರಣ ಮಾಡಲಾಗಿದೆ ಎಂದು ಅವರ ಪೈಕಿ ಗಣೇಶ್ ಎಂಬಾತ ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ತನಿಖೆ ಕೈಗೊಂಡಿದ್ದರು. ಉಳಿದ ಪ್ರವಾಸಿಗರನ್ನು ವಿಚಾರಣೆಗೆ ಒಳಪಡಿಸಿದ್ದರು.

ಕೊನೆಗೆ ಪೊಲೀಸ್ ವಿಚಾರಣೆಯಿಂದ ಈ ಪ್ರಕರಣ ಸತ್ಯಕ್ಕೆ ದೂರವಾದ ವಿಷಯ ಎಂಬದು ಹೊರಬಿದ್ದಿದೆ. ಕೈಲಾಸ್ ಎಂಬಾತನನ್ನು ಕಾರೊಂದರಲ್ಲಿ ಅಪಹರಿಸಿರುವದಾಗಿ ಆತನ ಸ್ನೇಹಿತರು ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದು, ಕೈಲಾಸ್ ಸೇರಿದಂತೆ ಪ್ರವಾಸಕ್ಕೆ ಬಂದ 6 ಮಂದಿ ಗುಲ್ಬರ್ಗದ ಕುರಿಕೋಟೆ ನಿವಾಸಿಗಳಾಗಿದ್ದು, ಅವರ ಪೈಕಿ ಕೈಲಾಸ್ ಅಲ್ಲಿನ ಗ್ರಾ.ಪಂ. ಸದಸ್ಯ ಎನ್ನಲಾಗಿದೆ. ಈ ತಿಂಗಳ 8ಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಗೆ ತಯಾರಿ ನಡೆದಿದ್ದು, ಈ ಆರು ಮಂದಿ ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ 6 ಜನ ಆರೋಪಿಗಳಾಗಿದ್ದು, ಅವರ ಮೇಲೆ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡು ಕೊಡಗು ಜಿಲ್ಲೆಗೆ ಪ್ರವಾಸಿಗರ ಸೋಗಿನಲ್ಲಿ ಆಗಮಿಸಿದ್ದು, ಈ ನಾಟಕ ಆಡಲು ಯತ್ನಿಸಿದ್ದಾರೆ ಎನ್ನುವ ಮಾಹಿತಿ ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

ಅಪಹರಣ ಪ್ರಕರಣ ಸೃಷ್ಟಿ ಮಾಡಿ ಸುಳ್ಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಐವರ ಮೇಲೆ ಎರಡನೇ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಕುಶಾಲನಗರ ಪೊಲೀಸ್ ಮೂಲಗಳು ತಿಳಿಸಿದ್ದು ಅಪಹರಣ ಪ್ರಹಸನಕ್ಕೆ ಇತಿಶ್ರೀ ಹಾಡಿದ್ದಾರೆ.