ಭಾಗಮಂಡಲ, ಫೆ. 6: ತಲಕಾವೇರಿ -ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿದ್ದಾಟಂಡ ಎಸ್. ತಮ್ಮಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸರಕಾರದ ಧಾರ್ಮಿಕ ಪರಷತ್‍ನಿಂದ ಇತ್ತೀಚೆಗೆ ನೂತನವಾಗಿ ನೇಮಕಗೊಂಡ ಸಮಿತಿಯ 9 ಮಂದಿ ಸದಸ್ಯರುಗಳ ಪೈಕಿ ತಮ್ಮಯ್ಯ ಅವರ ಹೆಸರನ್ನು ಸಮಿತಿಯ ಸದಸ್ಯೆ ನಿಡ್ಯಮಲೆ ಮೀನಾಕ್ಷಿ ಸುರೇಶ್ ಸೂಚಿಸಿದರು. ಮತ್ತೊಬ್ಬ ಸದಸ್ಯರಾದ ಕೆ.ಎಸ್ .ಅಣ್ಣಯ್ಯ ಅನುಮೋದಿಸಿದರು. ಸಭೆಯಲ್ಲಿ ಇತರ ಸದಸ್ಯರುಗಳಾದ ಉದಿಯಂಡ ಪಿ. ಸುಭಾಶ್, ಕೋಡಿ ಯು. ಮೋಟಯ್ಯ, ಡಾ. ಸಣ್ಣುವಂಡ ಎಂ. ಕಾವೇರಪ್ಪ, ಕೆದಂಬಾಡಿ ಟಿ. ರಮೇಶ್ ಹಾಗೂ ಲಕ್ಷ್ಮಿ ಶ್ರೀ ವಿ. ಕುಲಕರ್ಣಿ ಉಪಸ್ಥಿತರಿದ್ದರು. ಸಭೆಯಲ್ಲಿ ಅರ್ಚಕರ ಪರವಾಗಿ ಭಾಗಮಂಡಲದ ಅರ್ಚಕರಾದ ರವಿಕುಮಾರ್ ಅವರನ್ನು ಸದಸ್ಯರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು ಅವರೂ ಉಪಸ್ಥಿತರಿದ್ದರು. ಕಳೆದ ಮೂರು ವರ್ಷಗಳಿಂದ ಸಮಿತಿ ರಚನೆಗೊಳ್ಳದೆ ನೆನೆಗುದಿಗೆ ಬಿದ್ದಿದ್ದ ಸಮಿತಿಯ ಆಡಳಿತ ವ್ಯವಸ್ಥೆಗೆ ಈಗ ಮರುಜೀವ ಬಂದಂತಾಗಿದೆ.
ನೂತನ ಅಧ್ಯಕ್ಷ ತಮ್ಮಯ್ಯ ಅವರು ನಾಪೋಕ್ಲು ಕೊಳಕೇರಿ ಗ್ರಾಮದವರಾಗಿದ್ದು, ಈ ಹಿಂದೆ ತಲಕಾವೇರಿ- ಭಾಗಮಂಡಲ ಜೀರ್ಣೋದ್ಧಾರ ಸಮಿತಿ, ಪುನರ್ ಪ್ರತಿಷ್ಠಾಪನಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ನೂತನ ಅಧ್ಯಕ್ಷ ತಮ್ಮಯ್ಯ ಅವರನ್ನು ಸಮಿತಿಯ ಪದನಿಮಿತ್ತ ಕಾರ್ಯದರ್ಶಿ, ಮುಖ್ಯ ಕಾರ್ಯ ನಿರ್ವಾಹಕ ಜಗದೀಶ್ ಕುಮಾರ್ ಹಾರಾರ್ಪಣೆ ಮೂಲಕ ಸ್ವಾಗತಿಸಿದರು. ಬಿಎಸ್. ತÀಮ್ಮಯ್ಯ ಅವರು ಮಾತನಾಡಿ, ತಲಕಾವೇರಿ- ಭಾಗಮಮಂಡಲ ಈ ಎರಡೂ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವದಾಗಿ ನಿಲುವು ಪ್ರಕಟಿಸಿದರು. ನೂತನವಾಗಿ 10 ಮಂದಿ ವೃತ್ತಿ ಪರ ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು “ಗನ್‍ಮೆನ್”ಗಳನ್ನು ನೇಮಿಸುವದಾಗಿ ನುಡಿದರು.
ಭಾಗಮಂಡಲ ದೇವಾಲಯ ಹಿಂಭಾಗದಲ್ಲಿರುವ ಕೊಠಡಿ ಯೊಂದನ್ನು ದುರಸ್ತಿಗೊಳಿಸಿ ಕಚೇರಿಯಾಗಿ ರೂಪಿಸಲಾಗುವದು ಎಂದರು. ಮಳೆಗಾಲಕ್ಕೆ ಮುನ್ನ ದೇವಾಲಯ ಕಟ್ಟಡ ಸೋರುವಿಕೆ ಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ತಾ. 22 ರಂದು ಕ್ಷೇತ್ರಗಳಲ್ಲಿ ಬ್ರಹ್ಮ ಕಲಶ ನಡೆಸಲು ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಬಳಿಕ ವಿವಿಧ ಸಂಘ-ಸಂಸ್ಥೆಗÀಳ ಪ್ರಮುಖರನ್ನು ಆಹ್ವಾನಿಸಿ ಸಲಹೆ ಸೂಚನೆ ಪಡೆಯಲಾಗುತ್ತದೆ ಎಂದು ತಮ್ಮಯ್ಯ ಮಾಹಿತಿಯಿತ್ತರು.
ಅಭಿನಂದನೆ
ಬಳಿಕ ಇಲ್ಲಿನ ಐಬಿ ಯಲ್ಲಿ ನಾಪೋಕ್ಲು ಹಾಗೂ ಭಾಗಮಂಡಲ ವಿಭಾಗಗಳ ಕಾಂಗ್ರೆಸ್ ಪರವಾಗಿ ನೂತನ ಅಧ್ಯಕ್ಷ ತಮ್ಮಯ್ಯ ಅವರನ್ನು ಪ್ರಮುಖರುಗಳಾದ ರಮಾನಾಥ್, ಹ್ಯಾರಿಸ್, ಕುದುಪಜೆ ಪ್ರಕಾಶ್, ಪತ್ರಾವೊ, ರವಿ ಹೆಬ್ಬಾರ್, ಶಿವಶಂಕರ್ ವೈದ್ಯ, ಬಾರಿಕೆ ವೆಂಕಟರಾಮನ್, ಪ್ರಮೀಳ ವಿಜಯ, ಅಬ್ದುಲ್ ಲತೀಫ್ ಮೊದಲಾದವರು ಅಭಿನಂದಿಸಿದರು.
ವರದಿ: ಕುಯ್ಯಮುಡಿ ಸುನಿಲ್