ಮಡಿಕೇರಿ, ಫೆ.4: ಬೆಂಗಳೂರು ಅಂತರ್ಜಲ ನಿರ್ದೇಶನಾಲಯ, ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತ ರ್ಜಲ ಕಚೇರಿ ಇವರ ವತಿಯಿಂದ ಅಂತರ್ಜಲ ಸಂರಕ್ಷಣೆ, ಸದ್ಬಳಕೆ, ಮರು ಪೂರೈಕೆ, ಗುಣಮಟ್ಟ, ನಿರ್ವಹಣೆ ಹಾಗೂ ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳುವ ಅವಘಡಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೊಡಗು ಜಿಲ್ಲೆಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮೀಣ, ನಗರ ವ್ಯಾಪ್ತಿಯ ನೀರು ಸರಬರಾಜು ಎಂಜಿನಿಯರ್ ಗಳಿಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಅಂತರ್ಜಲ ಕುರಿತ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರದಲ್ಲಿ ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಅವರು ಕೈಪಿಡಿ ಭಾಗಗಳನ್ನು ಬಿಡುಗಡೆ ಮಾಡಿ, ಹೆಚ್ಚು ಮಳೆ ಬೀಳುವ ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಮಳೆಯ ಪ್ರಮಾಣ ಕುಸಿದಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ನಿಟ್ಟಿನಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪಿ.ಇ.ಎಸ್. ಕಾಲೇಜು ಸಿವಿಲ್ ವಿಭಾಗ ಪ್ರಾಧ್ಯಾಪಕರಾದ ಡಾ.ಪ್ರಸನ್ನಕುಮಾರ್ ಅವರು ಅಂತರ್ಜಲ ಸಂರಕ್ಷಣೆ, ಸದ್ಬಳಕೆ, ಮರು ಪೂರೈಕೆ, ಗುಣಮಟ್ಟ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು.

ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಕೆ.ಜಿ.ಸೌಮ್ಯ ಅವರು ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ ಕಾಯ್ದೆ 1999 ಹಾಗೂ ಅಂತರ್ಜಲ ಅದಿನಿಯಮ 2011 ಮತ್ತು ವಿಫಲ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುವ ಅವಘಡಗಳನ್ನು ತಪ್ಪಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ಉದ್ಬವಿಸುವ ಸಮಸ್ಯೆಗಳ ಹಾಗೂ ಪರಿಹಾರಗಳ ಬಗ್ಗೆ ಸಂವಾದ ನಡೆಸಿದರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರರಾದ ಗೋಪಾಲಕೃಷ್ಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಬಿ.ರೇಷ್ಮ, ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಕೆ.ಜಿ.ಸೌಮ್ಯ ಇತರರು ಪಾಲ್ಗೊಂಡಿದ್ದರು.