ಆಲೂರು-ಸಿದ್ದಾಪುರ: ವಿದ್ಯಾರ್ಥಿಗಳು ಮಾನವರಲ್ಲಿರುವ ಸಹಜವಾದ ಬುದ್ಧಿಶಕ್ತಿಯನ್ನು ಗುರಿ ಸಾಧನೆಗಾಗಿ ಪರಿವರ್ತನೆ ಮಾಡಿಕೊಂಡರೆ ಪರೀಕ್ಷೆಯಲ್ಲಿ ತನ್ನ ನಿರೀಕ್ಷೆಗೆ ಮೀರಿ ಸಾಧನೆ ಮಾಡಬಹುದು ಎಂದು ಮಂಗಳೂರು ವಿ.ವಿ. ನಿಲಯದ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಅಭಿಪ್ರಾಯಪಟ್ಟರು. ಆಲೂರು-ಸಿದ್ದಾಪುರ ಸರಕಾರಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಪರೀಕ್ಷೆಯಲ್ಲಿ ಜಯಗಳಿಸುವದು ಹೇಗೆ’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಬುದ್ಧಿಶಕ್ತಿ ಇರುತ್ತದೆ. ಆದರೆ ಅದನ್ನು ಗುರಿ, ಉದ್ದೇಶಕ್ಕಾಗಿ ಮೀಸಲಿಡಬೇಕು. ಪರೀಕ್ಷೆಯನ್ನು ಎದುರಿಸುವ ಬಗ್ಗೆ ಹಠ, ಛಲ ಸ್ವಭಾವವನ್ನು ಬೆಳೆಸಿಕೊಂಡರೆ ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸುಗಳಿಸಬಹುದೆಂದರು.
ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಆಹಮದ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಭಯ ಬಿಟ್ಟು ಆತ್ಮವಿಶ್ವಾಸಕ್ಕೆ ಆದ್ಯತೆ ನೀಡಬೇಕು. ಕಠಿಣ ಅಭ್ಯಾಸ, ಪರಿಶ್ರಮದಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಬಗ್ಗೆ ದೃಢ ವಿಶ್ವಾಸ ಹೊಂದುವ ಮೂಲಕ ಪರೀಕ್ಷೆಯಲ್ಲಿ ಉತ್ತಮವಾಗಿ ಜಯಗಳಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜು ಪ್ರಬಾರ ಪ್ರಾಂಶುಪಾಲ ಜಿ.ಟಿ. ಗಣಪತಿ ಭಟ್, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಬಗ್ಗೆ ಅರಿವು ಹೊಂದುವ ಅಗತ್ಯತೆ ಇರುವ ಉದ್ದೇಶದಿಂದ ಇಂತಹ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧನೆಗೆ ಪ್ರೇರಣೆಯಾಗುವಂತಹ ಮಾಹಿತಿಯನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಪೂರಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ದಿನೇಶ್ ಮಾಲಂಬಿ, ಚೆರಿಯಮನೆ ಸುರೇಶ್, ಉಪನ್ಯಾಸಕ ವಿಶ್ವನಾಥ್, ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಶಿವಕುಮಾರ್, ರಾಘವಿ, ಮಲ್ಲೇಶ್ ಮುಂತಾದವರಿದ್ದರು.
ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ