ವೀರಾಜಪೇಟೆ: ಪದವಿಪೂರ್ವ ವಿದ್ಯಾಭ್ಯಾಸ ಕಳೆದ ನಂತರ ಯಾವ ಐಚ್ಚಿಕ ವಿಷಯಗಳನ್ನು ಆರಿಸಿಕೊಳ್ಳಬೇಕು ಎಂಬದು ವಿದ್ಯಾರ್ಥಿಗಳ ನಿರ್ಧಾರವಾಗಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ ಸಿ.ಜಿ ಕುಶಾಲಪ್ಪ ಹೇಳಿದರು. ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ನಮ್ಮ ದೇಶದಲ್ಲಿರುವ ಯುವ ಶಕ್ತಿ ಬೇರ್ಯಾವ ದೇಶದಲ್ಲಿಲ್ಲ. ಇಂದಿನ ಯುವ ಜನಾಂಗ ಜಗತ್ತನ್ನು ಮುನ್ನಡೆಸುವ ಶಕ್ತಿ ಹೊಂದಿದೆ ಎಂದು ಹೇಳಿದರು. ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಒಳ್ಳೆಯದು-ಕೆಟ್ಟದು ಯಾವದೆಂಬದನ್ನು ನಾವು ತಿಳಿದುಕೊಂಡಿದ್ದೇವೆ. ಆದರೆ ಒಳ್ಳೆಯದನ್ನು ಆಚರಿಸಲು ಆಗುತ್ತಿಲ್ಲ. ಕೆಟ್ಟದನ್ನು ಬಿಡಲು ಸಾಧ್ಯವಿಲ್ಲ. ನಮ್ಮಲ್ಲಿ ಆತ್ಮವಿಶ್ವಾಸ ಇದ್ದರೆ ಕೀಳರಿಮೆ ಇರುವದಿಲ್ಲ. ನಮ್ಮ ಅಭಿರುಚಿ ಹಾಗೂ ಆಸಕ್ತಿಗೆ ತಕ್ಕಂತಹ ವಿಷಯಗಳನ್ನು ಆರಿಸಿಕೊಂಡಾಗ ಮುನ್ನಡೆ ಸಾಧಿಸಬಹುದು ಎಂದರು.
ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾದ್ಯಕ್ಷ ಸಿ.ಬಿ ದೇವಯ್ಯ, ಕಾರ್ಯದರ್ಶಿ ಕೆ.ಜಿ ಉತ್ತಪ್ಪ, ಪದವಿ ಪೂರ್ವ ಪ್ರಾಂಶುಪಾಲ ಎನ್.ಎಂ ನಾಣಯ್ಯ, ಸಲಹಾ ಸಮಿತಿ ಅಧ್ಯಕ್ಷೆ ಎಂ.ಪಿ ದಯಮಂತಿ ಉಪಸ್ಥಿತರಿದ್ದರು.