ಮಡಿಕೇರಿ, ಫೆ. 3: ಕೊಡವ ಐರಿ ಜನಾಂಗದ ಮಧ್ಯೆ ನಡೆಯುವ ಏಳನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವನ್ನು ಈ ಬಾರಿ ಮರಗೋಡು ಗ್ರಾಮದ ಐಮಂಡ ಕುಟುಂಬಸ್ಥರು ನಡೆಸಲಿದ್ದು, ಐಮಂಡ ಕಪ್ ಕ್ರಿಕೆಟ್ ನಮ್ಮೆ-2018ರ ಲಾಂಛನವನ್ನು ನಗರದ ಪತ್ರಿಕಾ ಭವನದಲ್ಲಿ ಕುಟುಂಬದ ಹಿರಿಯರು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಮಾತನಾಡಿ, ಇಂದು ಒಂದು ಜನಾಂಗ ಸಮಾಜದಲ್ಲಿ ಮುನ್ನಡೆಯಲು ಜನಾಂಗ ವಿವಿಧ ಚಟುವಟಿಕೆಗಳಲ್ಲಿ ನಿರ್ಭಿತರಾಗಿ ತೊಡಗಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನಾಂಗದ ನಡುವೆ ನಡೆಯುವ ಕ್ರೀಡಾಕೂಟಗಳು ಮಹತ್ವದ್ದಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಜನಾಂಗವನ್ನು ಸಮಾಜದ ಮುನ್ನಲೆಗೆ ತರಲು ಈ ಕ್ರಿಕೆಟ್ ಹಬ್ಬ ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಏಳನೇ ವರ್ಷದ ಐಮಂಡ ಕಪ್ ಕ್ರಿಕೆಟ್ ನಮ್ಮೆಗೆ ಐರಿ ಸಮಾಜದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು.
(ಮೊದಲ ಪುಟದಿಂದ) ಆರ್ಥಿಕವಾಗಿ ಮಾತ್ರ ಜನಾಂಗವನ್ನು ಬೆಳೆಸದೇ, ಉತ್ತಮ ಅವಕಾಶವನ್ನು ಪಡೆಯುವ ಉದ್ದೇಶದಿಂದ ಸಮಾಜ ಮುನ್ನಡಿಯಿಡಬೇಕು. ಜನಾಂಗದ ಏಳಿಗೆಗೆ ಕಾರಣವಾದ ಪ್ರತಿಯೊಬ್ಬರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಗಬೇಕು ಎಂದರು.
ಐಮಂಡ ಕುಟುಂಬದ ಹಿರಿಯರಾದ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪದ ತಜ್ಞ ಐಮಂಡ ಭಾಸ್ಕರ್, ಐರಿ ಸಮಾಜದ ನಿರ್ದೇಶಕಿ ಸುಧಾ ಪೊನ್ನಪ್ಪ, ಹರೀಶ್ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಕ್ರೀಡಾಕೂಟದ ವಿಶೇಷತೆ: ಕ್ರಿಕೆಟ್ ಹಬ್ಬದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ಇತರೆ ಮನರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮರಗೋಡು ಐಮಂಡ ಕುಟುಂಬದಿಂದ ಬೇರೆಡೆ ವಿವಾಹವಾಗಿ ಹೋಗಿರುವಂತº 50ಕ್ಕೂ ಅಧಿಕ ಮಹಿಳೆಯರನ್ನು ಸನ್ಮಾನಿಸಲಾಗುತ್ತದೆ. ಜೊತೆಗೆ ಐಮಂಡ ಕುಟುಂಬದ ಹಿರಿಯರಾದ ನೂರಕ್ಕೂ ಅಧಿಕ ಪ್ರಸವ ಮಾಡಿಸಿರುವ ನಾಟಿ ವೈದ್ಯೆ ಐಮಂಡ ಕಾಮವ್ವ ಗಣಪತಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುತ್ತದೆ ಎಂದರು.
ಕಲಾ ಪ್ರದರ್ಶನ: ಕ್ರಿಕೆಟ್ ಪಂದ್ಯಾಟ ಏ.21, 22, 23 ರಂದು ಮೂರ್ನಾಡುವಿನ ದಿ.ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತಿಮ ಪಂದ್ಯಾಟದಲ್ಲಿ ಅಂತಾರ್ರಾಷ್ಟ್ರೀಯ ಚಿತ್ರಕಲಾವಿದ ರೂಪೇಶ್ ನಾಣಯ್ಯ ಅವರ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಜೊತೆಗೆ ಈ ಹಿಂದೆ ಜಿಲ್ಲೆಯ ಖ್ಯಾತ ಬೊಂಬೆ ಕಲಾವಿದರಾಗಿದ್ದ ಬಾಬಣ್ಣ ಅವರ ಗೊಂಬೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.