ಕುಶಾಲನಗರ, ಫೆ. 2: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆ ಕುಶಾಲನಗರ ದಲ್ಲಿ ನಡೆಯಿತು. ಮಾಜಿ ಸಚಿವರು ಹಾಗೂ ಜಿಲ್ಲೆಯ ಚುನಾವಣಾ ಉಸ್ತುವಾರಿ ಸಿ.ಟಿ. ರವಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಬೂತ್ ಮಟ್ಟದ ಸಶಕ್ತೀಕರಣ ಬಗ್ಗೆ ಚರ್ಚಿಸಲಾಯಿತು.
ಮನೆಮನೆಗೆ ಕಾರ್ಯಕರ್ತರು ತೆರಳಿ ಮತದಾರರ ಸಂಪೂರ್ಣ ಮಾಹಿತಿ ಕಲೆ ಹಾಕುವದು, 5 ಬೂತ್ ಮಟ್ಟದ ಕೇಂದ್ರಗಳನ್ನು ಶಕ್ತಿ ಕೇಂದ್ರಗಳನ್ನಾಗಿ ಹಾಗೂ ನಗರ ಪ್ರದೇಶಗಳನ್ನು ಮಹಾಶಕ್ತಿ ಕೇಂದ್ರಗಳಾಗಿ ಪರಿಗಣಿಸಿ ಕಾರ್ಯ ಕರ್ತರು ಪಕ್ಷದ ಸಂಘಟನೆಗಾಗಿ ತೊಡಗಿಸಿಕೊಳ್ಳುವದು ಹಾಗೂ ತಾ. 4 ರಂದು ಬೆಂಗಳೂರಿಗೆ ಆಗಮಿಸುವ ಪ್ರಧಾನಮಂತ್ರಿ ಮೋದಿ ಅವರ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಸೂಚಿಗಳ ಬಗ್ಗೆ ಚರ್ಚೆ ನಡೆಯಿತು.
ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಗಳಿಸಲು ಶ್ರಮಿಸುವಂತೆ ಸಿ.ಟಿ. ರವಿ ಕರೆ ನೀಡಿದರು. ಸ್ಥಳೀಯ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪಚ್ಚಟ್ಟೋಳಂಡ ಮನು ಮುತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಪ್ರಮುಖರಾದ ರಾಬಿನ್ ದೇವಯ್ಯ, ಕಾಳನ ರವಿ, ಬಾಲಚಂದ್ರ ಕಳಗಿ, ರೀನಾ ಪ್ರಕಾಶ್, ಸ್ಥಳೀಯ ಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಇದ್ದರು.