ಮಡಿಕೇರಿ, ಫೆ. 3: ನಿನ್ನೆ ಸಂಜೆಗತ್ತಲೆ ನಡುವೆ ಕಾನನದ ಮಧ್ಯದಲ್ಲಿರುವ ಮನೆಗೆ, ಸೇನೆಯ ಸಮವಸ್ತ್ರ ಹೋಲುವ ಹಸಿರು ಧಿರಿಸು ತೊಟ್ಟಿದ್ದ ಮೂವರು ಅಪರಿಚಿತ ಶಸ್ತ್ರಧಾರಿಗಳು ಹಠಾತ್ ಪ್ರವೇಶಿಸುವದರೊಂದಿಗೆ ‘ನಮ್ಮ ಪರಿಚಯವಿದೆಯೇ..., ನಾವು ನಕ್ಸಲರು...?’ ಎಂದು ಮಾತು ಆರಂಭಿಸಿದ್ದಾರೆ. ಮನೆಯ ಯಜಮಾನ ಕುಡಿಯರ ಶಂಕಪ್ಪ ಹಾಗೂ ಪತ್ನಿ ಇಂದಿರಾ..., ನಿಮ್ಮನ್ನು ಗೊತ್ತು...! ಎಂದಾಗ ಅಪರಿಚಿತರು... ಹೇಗೆ...? ಎಂದು ಮರು ಪ್ರಶ್ನಿಸಿದ್ದಾರೆ. ‘ನಾವು ಟಿ.ವಿ. - ಪತ್ರಿಕೆಗಳಲ್ಲಿ ನೋಡಿದ್ದೇವೆ ಎಂದಾಗ, ಅಪರಿಚಿತರು ಹೌದು... ಹೌದು... ಎಂದಿದ್ದಾರೆ.ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡು ಶ್ರೀ ಮಹಾಗಣಪತಿ ಗುಡಿ ತಿರುವಿನಿಂದ ಸುಮಾರು ಮೂರುವರೆ ಕಿ.ಮೀ. ದೂರದಲ್ಲಿ ಇರುವ ಏರು ಮಾರ್ಗದ ಕಾಡು ಮೇಡುಗಳ ನಡುವೆÀ ಇರುವ ಗುಡ್ಡಗದ್ದೆ ಎಂಬಲ್ಲಿ ಸಂಜೆ ಸುಮಾರು 6.30ರ ಹೊತ್ತಿನಲ್ಲಿ ಈ ಪ್ರಸಂಗ ನಡೆದಿದೆ.
ಶಸ್ತ್ರಧಾರಿ ನಕ್ಸಲರು ಶಂಕಪ್ಪ ಅವರ ಮನೆ ಪ್ರವೇಶಿಸುವಾಗ ಪತ್ನಿ ಇಂದಿರಾ ಹಾಗೂ ಪುತ್ರ ಚಿದಾನಂದ ಇದ್ದು,
(ಮೊದಲ ಪುಟದಿಂದ) ಸುಬ್ರಹ್ಮಣ್ಯದಲ್ಲಿ ಹೋಂ ಗಾರ್ಡ್ ಆಗಿರುವ ಇನ್ನೋರ್ವ ಮಗ ಗಣೇಶ ಅದೇ ಹೊತ್ತಿಗೆ ಆಟೋ ರಿಕ್ಷಾದಲ್ಲಿ ಮನೆಗೆ ಟಿ.ವಿ.ಯೊಂದಿಗೆ ಬಂದಿದ್ದಾರೆ. ಟಿ.ವಿ. ಅಳವಡಿಸಲು ಮೆಕ್ಯಾನಿಕ್ ಸಹ ಕರೆದುಕೊಂಡು ಬಂದು, ಅಂಗಳದಲ್ಲಿ ಕೈಕಾಲು ತೊಳೆದು ಒಳಗೆ ಪ್ರವೇಶಿಸಿದ್ದಾರೆ.
ಈ ಸಂದರ್ಭ ಮನೆ ಹಿತ್ತಲ ಗುಡ್ಡ ಏರಿರುವ ನಕ್ಸಲರು, ಟಿ.ವಿ.ಯನ್ನು ಮನೆಯೊಳಗೆ ಅಳವಡಿಸಿ ಮೆಕ್ಯಾನಿಕ್ ಹಾಗೂ ಆಟೋದೊಂದಿಗೆ ಅದರ ಚಾಲಕ ತೆರಳಿದ ಕೂಡಲೇ ಮತ್ತೆ ಒಳ ಪ್ರವೇಶಿಸಿದ್ದಾರೆ. ಅಲ್ಲದೆ, ‘ನಾವು ಬಂದಿದ್ದು ಬೇಸರವಾಯಿತೆ? ಎಂದು ಕೇಳಿದ್ದಾರೆ. ಮನೆ ಮಂದಿ ಅಂಥದ್ದೇನು ಇಲ್ಲ ಎಂದಷ್ಟೇ ಉತ್ತರಿಸಿದ್ದಾರೆ.
ಬಳಿಕ ಈ ಅಪರಿಚಿತರು ತಮಗೆ ರಾತ್ರಿ ಊಟ ಮಾಡಬೇಕೆಂದು ಹೇಳಿದ್ದಲ್ಲದೆ, ಮನೆಯಲ್ಲಿ ಬೈಕ್ ಇರುವದನ್ನು ಖಚಿತಪಡಿಸಿಕೊಂಡು ನಿತ್ಯೋಪಯೋಗಿ ವಸ್ತುಗಳ ಪಟ್ಟಿಯೊಂದಿಗೆ ಅಂಗಡಿಗೆ ಹೋಗಿ ಅವುಗಳನ್ನು ಖರೀದಿಸಿ ತಂದುಕೊಡುವಂತೆ ನಗದು ಹಣ ನೀಡಿದ್ದಾರೆ. ಸಹೋದರರಾದ ಗಣೇಶ್ ಹಾಗೂ ಚಿದಾನಂದ ತಮ್ಮ ದ್ವಿಚಕ್ರ ವಾಹನದಲ್ಲಿ ಗುಡ್ಡಗದ್ದೆಯಿಂದ ಕಲ್ಲುಗುಂಡಿಗೆ ತೆರಳಿದ್ದಾರೆ. ಅಲ್ಲದೆ ತಾವು ಮನೆಗೆ ಬಂದಿರುವ ವಿಷಯ ಯಾರಿಗೂ ಗೊತ್ತಾಗಬಾರದೆಂದು ಶಸ್ತ್ರಧಾರಿ ಅಪರಿಚಿತರು ಎಚ್ಚರಿಸಿದ್ದಾರೆ.
ನಕ್ಸಲರು ನೀಡಿರುವ ಪಟ್ಟಿಯಲ್ಲಿ ಚಪ್ಪಲಿ ಸಹಿತ ಸಾವಿರಾರು ರೂಪಾಯಿ ಮೊತ್ತದ ದಿನಸಿ ಪದಾರ್ಥಗಳನ್ನು ಕಲ್ಲುಗುಂಡಿಗೆ ಬಂದು ಖರೀದಿಸುತ್ತಾರೆ.
ಇತ್ತ ಶಂಕಪ್ಪ ಮನೆಗೆ ಅಪರಿಚಿತರು ಬಂದಿದ್ದನ್ನು ಖಚಿತಪಡಿಸಿಕೊಂಡ ಅವರ ಸಂಬಂಧಿ ನೆರೆಮನೆಯ (ಕೂಗಳತೆ ದೂರ) ನಳಿನಾಕ್ಷ ಮೆಲ್ಲನೆ ಅಲ್ಲಿಗೆ ತೆರಳಿ ಯಾರೆಂದು ನೋಡುವಷ್ಟರಲ್ಲಿ ನಕ್ಸಲರ ಸುಳಿವಿನೊಂದಿಗೆ ವಾಪಾಸು ತಮ್ಮ ಮನೆಗೆ ಬಂದು ಬಿಡುತ್ತಾರೆ. ಅಲ್ಲಿಂದ ಮಂಗಳೂರಿನಲ್ಲಿರುವ ತಮ್ಮ ಸೋದರ ದಯಾನಂದ ಎಂಬವರಿಗೆ ವಿಷಯ ಮುಟ್ಟಿಸಿದ್ದಾರೆ.
ಗ್ರಾ.ಪಂ. ಅಧ್ಯಕ್ಷರಿಗೆ ಸುಳಿವು : ಈ ವೇಳೆಗೆ ದಯಾನಂದ ಮಂಗಳೂರಿನಿಂದ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಅವರಿಗೆ ಸುಳಿವು ನೀಡಿದ್ದಾರೆ. ಅಷ್ಟರಲ್ಲಿ ಗಣೇಶ ಹಾಗೂ ಚಿದಾನಂದ ಬೈಕ್ನಲ್ಲಿ ಕಲ್ಲುಗುಂಡಿಯ ಅಂಗಡಿಗೆ ತೆರಳಿ ಖರೀದಿಯಲ್ಲಿ ತೊಡಗಿದ ಸಂಗತಿ ಕೆಲವರ ಗಮನಕ್ಕೆ ಬಂದಿದೆ. ಅವರನ್ನು ವಿಚಾರಿಸಲಾಗಿ ಗಾಬರಿಯೊಂದಿಗೆ ಏನೂ ಹೇಳದೆ ವಸ್ತುಗಳೊಂದಿಗೆ ಮನೆಯತ್ತ ತೆರಳಿದ್ದಾರೆ.
ಆ ಹೊತ್ತಿಗೆ ಅಕ್ಕ ಪಕ್ಕ ಮನೆಗಳಲ್ಲಿ ಸುತ್ತಾಡಿ ಬಂದಿದ್ದ ನಕ್ಸಲರು ಶಂಕಪ್ಪ ಅವರ ಮನೆಯಲ್ಲಿ ರಾತ್ರಿ ಬೋಜನಕ್ಕೆಂದು ಮನೆ ಮಂದಿಗೆ ಸಿದ್ಧಗೊಳಿಸಿದ್ದ ಕಾಳು ಸಾಂಬಾರು ಹಾಗೂ ಅನ್ನವನ್ನು ಕಂಠಪೂರ್ತಿಯಾಗುವವರೆಗೆ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ರಾತ್ರಿಗೆ ಮಾಡಿದ್ದ ಅಡುಗೆಯೆಲ್ಲಾ ಉಂಡ ಬಳಿಕ ಮನೆಯಲ್ಲಿದ್ದ ಸುಮಾರು ಹತ್ತು ಕೆ.ಜಿ. ಅಕ್ಕಿ ಮತ್ತು ಉಪ್ಪು ಸಹಿತ ಅಂಗಡಿಯಿಂದ ಖರೀದಿಸಿ ತಂದಿದ್ದ ಪದಾರ್ಥಗಳೊಂದಿಗೆ ಈ ಮೂವರು ಶಂಕಪ್ಪ ಅವರ ಮನೆಯಿಂದ ಸಂಜೆಗತ್ತಲೆ ನಡುವೆ ಬಂದಿದ್ದ ದಾರಿಯಲ್ಲೇ ಹಿಂತೆರಳಿದ್ದಾರೆ.
ಶಂಕಪ್ಪ ಅವರ ಮನೆಯಿಂದ ಹೊರಡುವಾಗಲೂ ಯಾವದೇ ವಿಷಯವನ್ನು ಯಾರಿಗೂ ತಿಳಿಸದಂತೆ ಕಡೆಯದಾಗಿ ಎಚ್ಚರಿಕೆ ನೀಡಿ ಹೋಗಿದ್ದಾರೆ. ಸುಮಾರು ಎರಡು ಗಂಟೆಗಳ ಸಮಯ ಅಲ್ಲಿ ಕಳೆದಿರುವ ನಕ್ಸಲರು ತಮ್ಮ ಮೊಬೈಲ್ಗಳನ್ನು ಕೂಡ ಚಾರ್ಜ್ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಮನೆಯ ಹಿರಿಯ ದಂಪತಿ ಹಾಗೂ ಮಕ್ಕಳ ಸಹಿತ ಅಕ್ಕಪಕ್ಕದವರು ಗಾಬರಿಗೊಂಡಿದ್ದಾರೆ.
ಪೊಲೀಸರಿಗೆ ಮಾಹಿತಿ : ಮಂಗಳೂರಿನಿಂದ ರಾತ್ರಿ ದಯಾನಂದ ಗ್ರಾ.ಪಂ. ಅಧ್ಯಕ್ಷರಿಗೆ ನೀಡಿದ ಸುಳಿವು ಆಧರಿಸಿ ಅವರು ಪೊಲೀಸ್ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಆ ಬೆನ್ನಲ್ಲೇ ಎಸ್ಪಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಹಾಗೂ ತಂಡ ತಡರಾತ್ರಿ ಕೊಯನಾಡುವಿನ ಗುಡ್ಡಗದ್ದೆಯಲ್ಲಿರುವ ಶಂಕಪ್ಪ ಮನೆಗೆ ಧಾವಿಸಿ ವಿಷಯ ಪಡೆಯುವದರೊಂದಿಗೆ ನಕ್ಸಲರ ಚಲನ ವಲನ ಕುರಿತು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲದೆ, ಇಂದು ಹಗಲಿಡಿ ಈ ಪ್ರದೇಶದಲ್ಲಿ ಕಾರ್ಯಾಚರಣೆಯೊಂದಿಗೆ ಪೊಲೀಸ್ ವರಿಷ್ಠರ ಸಹಿತ ನಕ್ಸಲ್ ನಿಗ್ರಹ ದಳ ಮತ್ತು ಸಶಸ್ತ್ರ ಪೊಲೀಸ್ ಪಡೆ ಗುಡ್ಡಗದ್ದೆ ಪ್ರದೇಶದಲ್ಲಿ ಮೊಕ್ಕಾಂ ಹೂಡಿದೆ.