ಮಡಿಕೇರಿ, ಫೆ. 3: ಭಾರತ ಸರಕಾರವು ಭಾರತೀಯ ದೂರವಾಣಿ ಸಂಚಾರ ನಿಗಮದಿಂದ ಮೊಬೈಲ್ ಟವರ್‍ಗಳನ್ನು ಪ್ರತ್ಯೇಕಿಸದಂತೆ ಆಗ್ರಹಿಸಿ ಜ. 30 ರಿಂದ ನಡೆಸುತ್ತಿರುವ ಮುಷ್ಕರಕ್ಕೆ ಇಂದು ತೆರೆ ಬಿದ್ದಿದೆ.
ಬಿಎಸ್‍ಎನ್‍ಎಲ್ ನೌಕರರ ವಿವಿಧ ಒಕ್ಕೂಟಗಳ ಸಹಯೋಗದೊಂದಿಗೆ ನಡೆಸಲಾದ ಮುಷ್ಕರವನ್ನು ಕೈಬಿಡುವಂತೆ ಕೇಂದ್ರ ಸಂಪರ್ಕ ಇಲಾಖೆ ಅಧಿಕಾರಿಗಳು ವಿನಂತಿಸಿಕೊಂಡಿದ್ದು, ಆ ದಿಸೆಯಲ್ಲಿ ಒಂದು ಹಂತದ ಹೋರಾಟವನ್ನು ಇಂದು ಮುಕ್ತಾಯಗೊಳಿಸಲಾಗಿದೆ.
ಆದರೆ, ನೌಕರರ ಬೇಡಿಕೆಗೆ ಸಂಬಂಧಿಸಿದಂತೆ ಯಾವದೇ ಭರವಸೆ ಲಭಿಸದ ಹಿನ್ನೆಲೆಯಲ್ಲಿ ಬಿಎಸ್‍ಎನ್‍ಎಲ್ ನೌಕರರ ಒಕ್ಕೂಟದಿಂದ ತಾ. 23 ರಂದು ನವದೆ ಹಲಿಯಲ್ಲಿರುವ ಬಿಎಸ್‍ಎನ್‍ಎಲ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಅಂದು ದಿಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ನೌಕರರ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಅಂದಿನ ಕಾರ್ಯಕ್ರಮ ದಲ್ಲಿ ಸಂಘದ ಕೊಡಗಿನ ಪದಾಧಿಕಾರಿಗಳು ಭಾಗವಹಿಸಲಿರು ವದಾಗಿ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ಇಲ್ಲಿನ ಜಿಲ್ಲಾ ಕೇಂದ್ರ ಕಚೇರಿ ಎದುರು ಈ ದಿನ ಕುಶಾಲನಗರ ಹೋಬಳಿ ನೌಕರರು ಹಾಗೂ ಜಿಲ್ಲಾ ಪದಾಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.