ವರದಿ ವಾಸು ಸಿದ್ದಾಪುರ, ಫೆ. 3: ಜನವಸತಿ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗುತ್ತಿ ರುವ ಹಿನ್ನೆಲೆಯಲ್ಲಿ ಕಾರ್ಮಿಕರು ಭಯಭೀತರಾಗಿರುವ ಘಟನೆ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟಗಳಲ್ಲಿ ನಡೆದಿದೆ.
ಬಿ.ಬಿ.ಟಿ.ಸಿ. ಸಂಸ್ಥೆಗೆ ಸೇರಿದ ಬೀಟಿಕಾಡು ಕಾಫಿ ತೋಟದ ಒಳಗೆ ಇತ್ತೀಚೆಗೆ ಕಾಡು ಕೋಣವೊಂದನ್ನು ಹುಲಿಯು ಬೇಟೆಯಾಡಿ ಸಾಯಿಸಿ ತಿಂದಿರುವ ಘಟನೆಯ ಬಳಿಕ ಇದೀಗ ಬೀಟಿಕಾಡು ತೋಟದ ಕಾರ್ಮಿಕರ ವಸತಿ ಗೃಹದ ಸಮೀಪ ಕಳೆದೆರಡು ದಿನಗಳಿಂದ ಹುಲಿಯು ಓಡಾಡುತ್ತಿರುವ ಬಗ್ಗೆ ಕಾರ್ಮಿಕರು ಆತಂಕಗೊಂಡಿದ್ದು, ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹುಲಿಯು ಲೈನ್ ಮನೆಗಳ ಸಮೀಪ ಓಡಾಡುತ್ತಿರುವ ಹೆಜ್ಜೆ ಗುರುತು ಕಂಡು ಬಂದಿದೆ. ಕಳೆದ ಕೆಲವು ತಿಂಗಳಿನಿಂದ ಕಾಡಾನೆಗಳ ಹಾವಳಿಯಿಂದಾಗಿ ತತ್ತರಿಸಿರುವ ಕಾರ್ಮಿಕರು ಇದೀಗ ಹುಲಿಯ ಧಾಳಿಯಿಂದಾಗಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ತಮಗೆ ತೋಟದ ಒಳಗೆ ಕೆಲಸ ಮಾಡಲು ಭಯವಾಗುತಿದೆ ಯೆಂದು ಕಾರ್ಮಿಕರು ‘ಶಕ್ತಿ’ಯೊಂದಿಗೆ ಅಳಲು ತೊಡಿಕೊಂಡಿದ್ದಾರೆ. ಜಾನುವಾರು ಹಾಗೂ ಕಾಡು ಕೋಣಗಳ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿ ತಿಂದಿದ್ದರರೂ ಕೂಡ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳದೆ ಹುಲಿಯನ್ನು ಸೆರೆಹಿಡಿಯಲು ಬೋನ್ ಅಳವಡಿಸದೇ ಇರುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಕಾರ್ಮಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹುಲಿಯನ್ನು ಸೆರೆಹಿಡಿಯುವ ಮೂಲಕ ಮುಂದೆ ಆನಾಹುತ ಆಗದ ರೀತಿಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಬೀಟಿಕಾಡು ಅಲ್ಲದೇ ಸಿದ್ದಾಪುರ ಸ್ವರ್ಣಗಿರಿ ತೋಟದಲ್ಲಿ ಹಾಗೂ ಬಾಡಗ ಬಾಣಂಗಾಲ ಗ್ರಾಮದ ತೋಟಗಳಲ್ಲಿ ಹುಲಿಯು ಓಡಾಡುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹುಲಿ ಸೆರೆಗೆ ಕ್ರಮ: ಎ.ಸಿ.ಎಫ್. ರೋಶಿನಿ
ಬೀಟಿಕಾಡಿನ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ, ಜಾನುವಾರಗಳು ಹಾಗೂ ಕಾಡು ಕೋಣ ಮೇಲೆ ಧಾಳಿ ನಡೆಸಿ ಸಾಯಿಸಿ ತಿಂದು ಆತಂಕ ಸೃಷ್ಟಿಸಿರುವ ಹುಲಿಯನ್ನು ಸೆರೆಹಿಡಿ ಯುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಸಭೆ ನಡೆಸಿ ಹುಲಿಯನ್ನು ಸೆರೆಹಿಡಿಯಲು ಬೋನ್ ಇರಿಸಲು ಕ್ರಮ ಕೈಗೊಳ್ಳ ಲಾಗುವದೆಂದು ವೀರಾಜಪೇಟೆ ವಲಯ ಎ.ಸಿ.ಎಫ್. ರೋಶಿನಿ ತಿಳಿಸಿದರು.
ಸೋಲಾರ್ ಬೇಲಿ ಅಳವಡಿಸಲು ಆಗ್ರಹ
ಸಿದ್ದಾಪುರ ಸಮೀಪದ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟಗಳಲ್ಲಿ ಕಾಡಾನೆಗಳು ಹಾಗೂ ಹುಲಿಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯ ತೋಟಗಳ ಸುತ್ತಲು ಸೋಲಾರ್ ವಿದ್ಯುತ್ ಬೇಲಿಯನ್ನು ಅಳವಡಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದು, ವಿದ್ಯುತ್ ಬೇಲಿ ಅಳವಡಿಸಿದಲ್ಲಿ ಕಾಡು ಪ್ರಾಣಿಗಳ ಉಪಟಳವನ್ನು ನಿಯಂತ್ರಿಸಬಹುದೆಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಬಾಡಿಗೆಗೆ ತೆರಳಲು ಹಿಂದೇಟು..!
ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟಗಳಲ್ಲಿ ಕಾಡಾನೆಗಳು ಹಾಗೂ ಹುಲಿಯ ಹಾವಳಿಯಿಂದಾಗಿ ಸಿದ್ದಾಪುರ ಪಟ್ಟಣದಿಂದ ತೋಟದ ಲೈನ್ ಮನೆಗಳಿಗೆ ತೆರಳುವ ಮಂದಿ ವಾಹನಗಳನ್ನು ಬಾಡಿಗೆಗೆ ಕರೆದಲ್ಲಿ ವಾಹನದ ಚಾಲಕರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾ ರೆಂದು ಬೀಟಿಕಾಡು ತೋಟದ ಕಾರ್ಮಿಕ ಮುಖಂಡ ನಾರಾಯಣ ಅಳಲು ತೊಡಿಕೊಂಡಿದ್ದಾರೆ. ಅಲ್ಲದೆ ಸಿದ್ದಾಪುರ ಪಟ್ಟಣದಲ್ಲಿ ಸಂಜೆ 6 ಗಂಟೆಯ ಬಳಿಕ ತೋಟದ ಸುತ್ತಮುತ್ತಲು ವಾಸಿಸುವ ಮಂದಿ ಮನೆ ಸೇರುತ್ತಿರುವದರಿಂದ ಪಟ್ಟಣದಲ್ಲಿ ಗ್ರಾಹಕರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.