ಸೋಮವಾರಪೇಟೆ, ಫೆ. 3: ಸಮೀಪದ ನಗರೂರು ಗ್ರಾಮದ ಬಳಗುಂದ ಕಾಫಿ ತೋಟದಲ್ಲಿ ಅಸ್ಸಾಮಿ ಹಾಗು ಸ್ಥಳೀಯ ಕಾರ್ಮಿಕರ ನಡುವೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಸ್ಪರ ಮೊಕದ್ದಮೆ ದಾಖಲಾಗಿದೆ.ಅಸ್ಸಾಂನ ಕಾರ್ಮಿಕ ಬಿಲಾಲ್ ಹುಸೇನ್ ನೀಡಿದ ದೂರಿನನ್ವಯ, ಅದೆ ಎಸ್ಟೇಟ್‍ನ ಕಾರ್ಮಿಕರಾದ ಸುಬ್ರಮಣಿ, ತೋಮಸ್ ಹಾಗು ಮತ್ತಿಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಸುಬ್ರಮಣಿ ನೀಡಿದ ದೂರಿನನ್ವಯ ಬಿಲಾಲ್ ಹುಸೇನ್ ಸೇರಿದಂತೆ ಐವರು ಅಸ್ಸಾಮಿಗರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ನಿನ್ನೆ ಸಂಜೆ ಎಸ್ಟೇಟ್‍ನ ಲೈನ್‍ಮನೆಯ ಪಕ್ಕದಲ್ಲಿ ಕಾರ್ಮಿಕರ ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ, ಬಿಲಾಲ್‍ನ 20 ದಿನದ ಮಗುವಿನ ತಲೆಗೆ ಚೆಂಡು ತಗುಲಿತು ಎನ್ನಲಾಗಿದ್ದು, ಈ ವಿಷಯಕ್ಕೆ ಕಾರ್ಮಿಕರ ನಡುವೆ ಜಗಳ ನಡೆದಿದೆ.

ಪರಿಣಾಮ ಬಿಲಾಲ್‍ನ ಪತ್ನಿಯ ತಲೆಗೆ ಪೆಟ್ಟಾಗಿದ್ದು ಗಾಯಗೊಂಡಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಸುಬ್ರಮಣಿ ಹಾಗು ಅವರ ತಾಯಿ ಗೌರಿ, ಇನ್ನೋರ್ವ ಕಾರ್ಮಿಕ ತೋಮಸ್ ಎಂಬವರಿಗೆ ಅಸ್ಸಾಮಿ ಕಾರ್ಮಿಕರು ಹಲ್ಲೆ ನಡೆಸಿದ್ದು, ಮೂವರಿಗೂ ಗಾಯಗಳಾಗಿವೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದುಕೊಂಡಿದ್ದು, ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.