ಮಡಿಕೇರಿ, ಫೆ. 2: ಕಾಫಿ ಮಂಡಳಿಯು ಬೆಳೆಗಾರರ ಹಿತವನ್ನು ಕಾಪಾಡುವದರೊಂದಿಗೆ, ಸಹಾಯಧನ ನೀಡುವದ್ದನ್ನು ಮುಂದುವರಿಸುತ್ತಾ, ಕಾಲ ಕಾಲಕ್ಕೆ ಶೇಕಡವಾರು ಹೆಚ್ಚಿಸಬೇಕೆಂದು ಸೋಮವಾರಪೇಟೆ ತಾಲೂಕು ಬೆಳೆಗಾರರ ಹೋರಾಟ ಸಮಿತಿ ಬೇಡಿಕೆ ಮಂಡಿಸಿದೆ. ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಮಿತಿ ಪ್ರಮುಖರು ಈ ಬಗ್ಗೆ ಗಮನ ಸೆಳೆದಿದ್ದಾರೆ.
ಕಾಫಿ ಮಂಡಳಿ ವಿಜ್ಞಾನಿ ಡಾ. ರಘುರಾಮನ್ ಹಾಗೂ ಉಪಾಧ್ಯಕ್ಷೆ ರೀನಾ ಪ್ರಕಾಶ್, ಸದಸ್ಯರುಗಳಾದ ಎಂ.ಬಿ. ಅಭಿಮನ್ಯುಕುಮಾರ್, ಜಿ.ಎಲ್. ನಾಗರಾಜ್ ಅವರುಗಳ ಸಮ್ಮುಖ ಈ ಬಗ್ಗೆ ಚರ್ಚೆ ನಡೆಸಿರುವ ಪ್ರಮುಖರು, ಕಾಫಿಗೆ ಸಬ್ಸಿಡಿಯೊಂದಿಗೆ ಕಳಪೆ ಕ್ರಿಮಿನಾಶಕ ಹಾಗೂ ಗೊಬ್ಬರ ಪೂರೈಸದಿರುವದು ಸೇರಿದಂತೆ, ನೆರಳು ಆಧಾರಿತ ಕಾಫಿಯನ್ನು ಬೆಳೆಯಲು ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ.
ದೇಶೀಯ ಕಾಫಿ ಬಳಕೆಗೆ ಮಂಡಳಿ ಪ್ರೋತ್ಸಾಹಿಸುವದು, ಆಮದು ನೀತಿಗೆ ಕಡಿವಾಣ, ಬಿಳಿಕಾಂಡ ಕೊರಕ ರೋಗ ನಿಯಂತ್ರಣ ಸಹಿತ ಕೇಂದ್ರ ಸರಕಾರದ ಗಮನ ಸೆಳೆದು ಬೆಂಬಲ ಬೆಲೆ ಘೋಷಿಸುವಂತೆಯೂ ಆಗ್ರಹಿಸಲಾಗಿದೆ. ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಎಂ.ಸಿ. ಮುದ್ದಪ್ಪ, ಬಿ.ಎಸ್. ಸುದೀಪ್, ವಕ್ತಾರ ಎಂ.ಎ. ಶ್ಯಾಂ ಪ್ರಸಾದ್ ಮೊದಲಾದವರು ಹಾಜರಿದ್ದರು.