ವೀರಾಜಪೇಟೆ, ಫೆ. 3: ಪಟ್ಟಣ ಪಂಚಾಯಿತಿಯಿಂದ ಕುಡಿಯುವ ನಲ್ಲಿ ನೀರು ಪೂರೈಕೆ, ರಸ್ತೆ ಚರಂಡಿ ದುರಸ್ತಿ, ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವದು ಸೇರಿದಂತೆ ನಾಗರಿಕರ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ನೀಡಲು ಬಜೆಟ್‍ನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಪ.ಪಂ. ಅಧ್ಯಕ್ಷ ಇ.ಸಿ.ಜೀವನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ 2018-19ನೇ ಸಾಲಿನ ಬಜೆಟ್ ಕುರಿತು ಪ್ರಸ್ತಾಪಿಸಿದ ಸದಸ್ಯರುಗಳು ಪಂಚಾಯಿತಿ ಆದಾಯ ಸಂಪತ್ತನ್ನು ಕ್ರೋಢಿಕರಿಸಿ ಮುಂದಿನ ಸಾಲಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ನಿರ್ಧರಿಸಲಾಯಿತು.

ಸಭೆಯಲ್ಲಿ ಹಿರಿಯ ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ ಮಾಂಸ ಮಾರುಕಟ್ಟೆ ಬಳಿ ಆಧುನಿಕ ಮತ್ಸ್ಯಭವನಕ್ಕೆ 2013 ರಲ್ಲಿ ಅಡಿಪಾಯ ಹಾಕಲಾಯಿತು. ಸುಮಾರು ಎಂಟು ತಿಂಗಳ ಅವಧಿಯಲ್ಲಿ ಮುಕ್ತಾಯವಾಗಬೇಕಾಗಿದ್ದ ಕಾಮಗಾರಿ ಇನ್ನು ಆಮೆನಡಿಗೆಯಲ್ಲಿ ಮುಂದುವರೆದು ಕಟ್ಟಡ ಅಪೂರ್ಣಗೊಂಡು ಅನೇಕ ತಿಂಗಳುಗಳಿಂದ

(ಮೊದಲ ಪುಟದಿಂದ) ಕಾಮಗಾರಿ ಸ್ಥಗಿತಗೊಂಡಿದೆ. ಇದನ್ನು ಮಂಗಳೂರಿನಲ್ಲಿರುವ ಸಂಬಂಧಿಸಿದ ಮತ್ಸ್ಯ ಇಲಾಖೆ, ಮತ್ಸ್ಯ ಭವನ ಪೂರ್ಣಗೊಳಿಸುವ ಕುರಿತು ಯಾವದೇ ಮಾಹಿತಿ ನೀಡುತ್ತಿಲ್ಲ. ಈಗ ಮತ್ಸ್ಯ ಭವನ ಕಟ್ಟುವ ಸ್ಥಳದಲ್ಲಿ ಮಾಂಸ ಹಾಗೂ ಹಸಿ ಮೀನು ಮಾರುಕಟ್ಟೆಗಳಿದ್ದು ಐದು ವರ್ಷಗಳಿಂದ ಕಟ್ಟಡದ ಅಭಾವದಿಂದ ಮಾರುಕಟ್ಟೆಗಳ ಹರಾಜನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ವರ್ಷ ಈ ಹರಾಜಿನಿಂದ ಪಂಚಾಯಿತಿಗೆ ರೂ 60 ಲಕ್ಷ ಆದಾಯ ಬರುತ್ತಿದ್ದುದು ಖೋತಾ ಆಗಿದೆ. ಐದು ವರ್ಷದಲ್ಲಿ ಪಂಚಾಯಿತಿ ಬೊಕ್ಕಸಕ್ಕೆ ರೂ ಮೂರು ಕೋಟಿ ನಷ್ಟ ಸಂಭವಿಸಿದೆ. ಮೊದಲೇ ಪಂಚಾಯಿತಿ ಖಜಾನೆ ಖಾಲಿ ಇದೆ. ಹರಾಜಿನ ನಷ್ಟವು ಇದಕ್ಕೆ ಸೇರಿದೆ. ಆದ್ದರಿಂದ ಇಲಾಖೆಗೆ ಅಂತಿಮ ಗಡುವು ನೀಡಿ ಮತ್ಸ್ಯಭವನದ ಅಪೂರ್ಣ ಕಟ್ಟಡವನ್ನು ಸ್ವಾಧೀನ ಪಡಿಸಿಕೊಳ್ಳಲು ನೀಡಿದ ಸಲಹೆಗೆ ಸಭೆ ಸಮ್ಮತಿಸಿತು.

ಸದಸ್ಯೆ ಶೀಬಾ ಪೃಥ್ವಿನಾಥ್ ಮಾತನಾಡಿ ಕೇಬಲ್ ಸಂಸ್ಥೆಗಳ ಪರವಾನಗಿ ಶುಲ್ಕವನ್ನು ಆದಾಯಕ್ಕೆ ತಕ್ಕಂತೆ ಪರಿಷ್ಕರಿಸಬೇಕು. ಪಟ್ಟಣದಲ್ಲಿ ಸುಮಾರು 6,600 ಕೇಬಲ್ ಗ್ರಾಹಕರಿದ್ದು ರೂ ಒಂದು ಕೋಟಿ ಎಪ್ಪತ್ತೈದು ಮಾಸಿಕವಾಗಿ ಕಂತು ಸಂಗ್ರಹಿಸಲಾಗುತ್ತಿದೆ ಎಂದಾಗ ಇತರ ಸದಸ್ಯರುಗಳು ಇದಕ್ಕೆ ಧ್ವನಿಗೂಡಿಸಿದರು.

ಎಸ್.ಎಚ್. ಮೈನುದ್ದೀನ್ ಮಾತನಾಡಿ ಕಟ್ಟಡದ ಪರವಾನಗಿ ಪಡೆದು ಕಾನೂನು ಬಾಹಿರವಾಗಿ ಕಟ್ಟಿದ ಕಟ್ಟಡಗಳು, ಕಟ್ಟಡದ ನಕಾಶೆಯಲ್ಲಿ ಪಾರ್ಕಿಂಗ್ ಇದ್ದರೂ ಅದೇ ಸ್ಥಳವನ್ನು ಬೇರೆ ಉಪಯೋಗಕ್ಕೆ ಬಳಸಿರುವದಕ್ಕೆ ದಂಡ ವಿಧಿಸಬೇಕಾಗಿದೆಯಾದರೂ ಇದನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವಂತೆ ಸಲಹೆ ನೀಡಿದರು.

ಸದಸ್ಯರುಗಳಾದ ಟಿ.ಜೆ.ಶಂಕರ್ ಶೆಟ್ಟಿ, ಸಚಿನ್ ಕುಟ್ಟಯ್ಯ, ಕೆ.ಎನ್. ವಿಶ್ವನಾಥ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯಕ್ಕೆ ಆಧÀ್ಯತೆ ನೀಡುವದರೊಂದಿಗೆ 2018-19 ನೇ ಸಾಲಿಗೆ ಉಳಿತಾಯ ಬಜೆಟ್‍ಗೆ ಒಲವು ತೋರಿದರು.

ತಾ. 8ರಂದು 2018-19ರ ಸಭೆಯಲ್ಲಿ ಬಜೆಟ್ ಮಂಡನೆ ಮಾಡುವಂತೆ ಸಭೆ ತೀರ್ಮಾನಿಸಿತು. ಕಳೆದ 2017-18 ರ ಬಜೆಟ್ ಸಭೆಯಲ್ಲಿ ಒಟ್ಟು ಆದಾಯ ರೂ 15,17,37,000 ಕೋಟಿಯಲ್ಲಿ ರೂ 14,99,49,000 ಕೋಟಿ ವೆಚ್ಚ ತೋರಿಸಿ 17,88,000 ಉಳಿತಾಯ ಎಂದು ಬಜೆಟ್ ಅಂಗೀಕರಿಸಲಾಗಿತ್ತು.

ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಸಭೆಯಲ್ಲಿ 3 ಮಂದಿ ನಾಮ ನಿರ್ದೇಶನ ಸದಸ್ಯರುಗಳು ಸೇರಿದಂತೆ 5 ಮಂದಿ ಗೈರು ಹಾಜರಾಗಿದ್ದರು.