ಕೂಡಿಗೆ, ಫೆ. 3: ಸೋಮವಾರ ಪೇಟೆ ತಾಲೂಕು ಪಂಚಾಯ್ತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳ ತಂಡ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಣಸೆಪಾರೆ ಹಾಗೂ ಬ್ಯಾಡಗೊಟ್ಟ ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರಕಾರದಿಂದ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡುವ ಸಂದರ್ಭ ಈ ಹಾಡಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ತುರ್ತಾಗಿ ಒದಗಿಸುವಂತೆ ಹಾಡಿ ಜನರ ಮನವಿಯಂತೆ ತಾ.ಪಂ ಅಧ್ಯಕ್ಷೆ ಪುಷ್ಪ ಮತ್ತು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು, ಸೌಲಭ್ಯ ತುರ್ತಾಗಿ ಒಗಿಸುವಂತೆ ಸ್ಥಳದಲ್ಲಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಹುಣಸೆಪಾರೆ ಹಾಡಿಯಲ್ಲಿರುವ 15 ಕುಟುಂಬದ ಮುಖ್ಯಸ್ಥರು ತಮ್ಮ ಅಹವಾಲುಗಳನ್ನು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು. ಅಹವಾಲುಗಳನ್ನು ಸ್ವೀಕರಿಸಿದ ಜನಪ್ರತಿನಿಧಿಗಳು ಹಂತ ಹಂತವಾಗಿ ಮೂಲಭೂತ ಸೌಲಭ್ಯ ಹಾಗೂ ಶೀಘ್ರವಾಗಿ ಆಗಬೇಕಾಗಿರುವ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‍ಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಇಲಾಖೆಗಳಿಗೆ ತೆರಳಿ ದಾಖಲಾತಿಗಳನ್ನು ನೀಡಿ ಸರಿಪಡಿಸಿಕೊಳ್ಳುವಂತೆ ಹಾಡಿಯ ಜನರಿಗೆ ತಿಳಿಸಿದರು.

ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಆದಿವಾಸಿಗಳ ಪುನರ್ವಸತಿ ಕೇಂದ್ರಕ್ಕೂ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಕಾಮಗಾರಿಗೆ ಬೇಕಾಗುವ ಸಾಮಾಗ್ರಿಗಳ ಕೊರತೆಯ ಬಗ್ಗೆ ಗುತ್ತಿಗೆದಾರರು ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ, ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ರಹಿತರಿಗೆ ಮಂಜೂರಾಗಿರುವ ಜಾಗವನ್ನು ತಾಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಕಂದಾಯಾಧಿಕಾರಿಗಳು ಸರ್ವೆ ನಡೆಸಿ ಜಾಗವನ್ನು ಗುರುತಿಸಿಕೊಡಬೇಕೆಂದು ತಾ.ಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್. ಮಂಜುಳಾ, ತಾಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಧರ್ಮಪ್ಪ, ತಾಲೂಕು ಪಂಚಾಯ್ತಿ ಸದಸ್ಯ ಗಣೇಶ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ಸುನಿಲ್, ಸಮಾಜ ಕಲ್ಯಾಣಾಧಿಕಾರಿ ಹಾಗೂ ಅಧಿಕಾರಿಗಳು ಇದ್ದರು.