ಗೋಣಿಕೊಪ್ಪ ವರದಿ, ಫೆ. 3: ಮತ್ತಿಗೋಡು ವಲಯದಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಸುಮಾರು 50 ಎಕರೆಯಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಅರಣ್ಯ ಇಲಾಖೆಯಿಂದ ನಡೆದ ತುರ್ತು ಕಾರ್ಯಾ ಚರಣೆಯಿಂದಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.
ನಾಗರಹೊಳೆ ಅರಣ್ಯದ ಆನೆಚೌಕೂರು ಗೇಟ್ ಸಮೀಪದ ಅರಣ್ಯದಲ್ಲಿ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಇದರಿಂದಾಗಿ ಕಾರ್ಯಾಚರಣೆ ನಡೆಸಿ ಮತ್ತಿಗೋಡು ವನ್ಯಜೀವಿ ಹಾಗೂ ತಿತಿಮತಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು.
ಗೋಣಿಕೊಪ್ಪ, ಪಿರಿಯಾಪಟ್ಟಣ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ತಿತಿಮತಿ ಹಾಗೂ ಮತ್ತಿಗೋಡು ಆನೆಚೌಕೂರು ವನ್ಯ ಜೀವಿ ವಲಯದ ಸುಮಾರು 100 ಕ್ಕೂ ಅಧಿಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿಕೊಂಡರು.
ಸಿಸಿಎಫ್ ಮಣಿಕಂಠನ್, ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಗಳಾದ ಕಿರಣ್, ಅಶೋಕ್ ಪಾಲ್ಗೊಂಡಿದ್ದರು.