ಮಡಿಕೇರಿ, ಫೆ. 1 : ಮಳೆಗಾಲದಲ್ಲಿ ದ್ವೀಪದಂತಾಗುವ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲು ಸೇತುವೆ ಕಾರ್ಯವನ್ನು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ಆರಂಭಿಸಬೇಕೆಂದು ವಿವಿಧ ಪಕ್ಷಗಳ ಸ್ಥಳೀಯ ಮುಖಂಡರುಗಳು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ ರಾಜ್ಯ ಸರ್ಕಾರ ಭಾಗಮಂಡಲಕ್ಕೆ ಬಹುದೊಡ್ಡ ಕೊಡುಗೆಯಾಗಿ ಮೇಲು ಸೇತುವೆಯ ಯೋಜನೆಯನ್ನು ನೀಡಿದ್ದು, ಇದನ್ನು ಪಕ್ಷಾತೀತವಾಗಿ ಸ್ಥಳೀಯ ಎಲ್ಲಾ ಮುಖಂಡರುಗಳು ಮತ್ತು ಗ್ರಾಮಸ್ಥರು ಸ್ವಾಗತಿಸುವದಾಗಿ ತಿಳಿಸಿದರು.ಸುಮಾರು ರೂ. 29.67 ಕೋಟಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಾಥಮಿಕ ಹಂತದ ಪ್ರಕ್ರಿಯೆ ಆರಂಭಗೊಳ್ಳುವ ಸಂದರ್ಭದಲ್ಲೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಾದ ಕ್ರಮವಲ್ಲವೆಂದರು. ಪ್ರತಿ ಮಳೆಗಾಲದಲ್ಲಿ ರಸ್ತೆ ಸಂಪರ್ಕವನ್ನು ಕಡಿದುಕೊಂಡು ಸ್ಥಳೀಯರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಾರೆ. ಮಳೆಗಾಲದ ಸಂಕಷ್ಟ ಸ್ಥಳೀಯರಿಗಷ್ಟೆ ತಿಳಿದಿದ್ದು, ಮೇಲು ಸೇತುವೆಯ ಯೋಜನೆಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದರು.

ಮೇಲು ಸೇತುವೆ ನಿರ್ಮಾಣದಿಂದ ಭಾಗಮಂಡಲ ಹಾಗೂ ತಲಕಾವೇರಿಯ ಪಾವಿತ್ರ್ಯತೆಗೆ ಯಾವದೇ ಧಕ್ಕೆ ಬರುವದಿಲ್ಲ, ಅಲ್ಲದೆ ಈ ಹಿಂದೆ ಜಿಲ್ಲಾಡಳಿತ ನಡೆಸಿದ್ದ ಸಭೆಯಲ್ಲಿ ತಂತ್ರಿಗಳಿಂದಲೂ ಮೇಲು ಸೇತುವೆ ಎತ್ತರದ ಬಗ್ಗೆ ಯಾವದೇ ಆಕ್ಷೇಪ ವ್ಯಕ್ತವಾಗಿಲ್ಲ. ಹೀಗಿರುವಾಗ ಯೋಜನೆ ಬಗ್ಗೆ ಗೊಂದಲ ಸೃಷ್ಟಿಸುವದು ಸರಿಯಲ್ಲವೆಂದ ಸತೀಶ್ ಜೋಯಪ್ಪ ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೇತುವೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕೆಂದು ಒತ್ತಾಯಿಸಿದರು.

ಭಾಗಮಂಡಲ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಯು ಜಟಿಲವಾಗುತ್ತಿದ್ದು, ಅರಣ್ಯ ಇಲಾಖೆ ಅಡ್ಡಿಯಾಗಿದೆ. ತಣ್ಣಿಮಾನಿ ಗ್ರಾಮದ ಸರ್ವೆ ಸಂಖ್ಯೆ 10/1 ರ ಜಾಗದ ಬದಲಾಗಿ ಕೋರಂಗಾಲ ಗ್ರಾಮದ ಸರ್ವೆ ಸಂಖ್ಯೆ 27/2ರಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಜನವಸತಿ ಪ್ರದೇಶದಿಂದ ದೂರವನ್ನು ಕಾಯ್ದುಕೊಂಡು ಕಸ ವಿಲೇವಾರಿ ಘಟಕವನ್ನು ಶೀಘ್ರ ಆರಂಭಿಸಬೇಕೆಂದರು.

(ಮೊದಲ ಪುಟದಿಂದ) ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳನ್ನು ಪವಿತ್ರ ತೀರ್ಥ ಕ್ಷೇತ್ರಗಳಾಗಿ ಮಾತ್ರ ಪರಿಗಣಿಸುವಂತೆ ಹಾಗೂ ಪ್ರವಾಸಿತಾಣದ ಪಟ್ಟಿಯಿಂದ ಕೈ ಬಿಡುವಂತೆ ಕೊಡಗು ಜಿಲ್ಲಾ ಪಂಚಾಯತ್ ಮಾಡಿರುವ ನಿರ್ಣಯ ಸ್ವಾಗತಾರ್ಹವಾಗಿದೆ. ನಿರ್ಣಯಗಳು ಕೇವಲ ನಿರ್ಣಯವಾಗಿ ಉಳಿಯದೆ ಪ್ರವಾಸೋದ್ಯಮ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಸತೀಶ್ ಒತ್ತಾಯಿಸಿದರು.

ತಲಕಾವೇರಿಯಿಂದ ಭಾಗಮಂಡಲದವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ವಾಹನ ದಟ್ಟಣೆಯನ್ನು ನಿಯಂತ್ರಿಸಬೇಕು. ತಲಕಾವೇರಿಯಲ್ಲಿ ಹೊಟ್ಟೆಪಾಡಿಗಾಗಿ ಹೊಟೇಲ್ ಹಾಗೂ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ನಡೆಸಲು ಗ್ರಾ.ಪಂ. ಅನುಮತಿ ನೀಡಬೇಕೆಂದು ಒತ್ತಾಯಿಸಿದ ಅವರು ಯಾವದೇ ಕಾರಣಕ್ಕೂ ಬಡ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂದರು.

ಬ್ರಹ್ಮಗಿರಿ ಬೆಟ್ಟಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ ಕಲ್ಪಿಸಬೇಕೆಂದ ಸತೀಶ್ ಜೋಯಪ್ಪ ಬೆಟ್ಟ ಹಾಗೂ ಪುಣ್ಯಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸಿಗರಿಂದ ನಿಯಮ ಬಾಹಿರ ಚಟುವಟಿಕೆ ನಡೆದರೆ ಅದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ದೇವಾಲಯ ಸಮಿತಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಎರಡು ಪುಣ್ಯ ಕ್ಷೇತ್ರಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದು. ದೇವಾಲಯದ ನಿಯಮ ಪಾಲನೆ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದರೆ ದೇವಾಲಯಗಳಲ್ಲಿ ಧ್ವನಿವರ್ಧಕದ ಮೂಲಕ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ವಿವಿಧ ಭಾಷೆಗಳಲ್ಲಿ ಸಲಹೆಗಳನ್ನು ನೀಡಬೇಕೆಂದು ಸತೀಶ್ ಜೋಯಪ್ಪ ಸಲಹೆ ನೀಡಿದರು. ಗ್ರಾ.ಪಂ. ಹಾಗೂ ದೇವಾಲಯ ಸಮಿತಿ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕುದುಪಜೆ ಪ್ರಕಾಶ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಸೂರ್ತಲೆ ಕಾಶಿ, ಜೆಡಿಎಸ್ ಸ್ಥಾನೀಯ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಅಯ್ಯಂಗೇರಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಯ್ಯಮುಡಿ ಮನೋಜ್ ಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಪತ್ರಾವೊ ಉಪಸ್ಥಿತರಿದ್ದರು.