ಮಡಿಕೇರಿ, ಫೆ. 1: ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರಸಕ್ತ ವರ್ಷದಲ್ಲಿ ನಿಗದಿಯಾಗಿರುವ ಅನುದಾನ ಮತ್ತು ವಿವಿಧ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೂಚನೆ ನೀಡಿದರು. ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಬಿಡುಗಡೆ ಮಾಡಿರುವ ಗುರಿಯ ಪ್ರಗತಿಯನ್ನು ಸಾಧಿಸಬೇಕು. ಯಾವದೇ ಕಾರಣಕ್ಕೂ ಅನುದಾನ ವಾಪಾಸಾಗದಂತೆ ಗಮನಹರಿಸುವದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬೇಸಿಗೆ ಇನ್ನೇನು ಮುಂದಿನ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಕುಡಿಯುವ ನೀರು ಕಾಮಗಾರಿಗಳಿಗೆ ಬಾಕಿ ಇರುವ ವಿದ್ಯುತ್ ಸಂಪರ್ಕ ಕಲ್ಪಿಸುವದು, ಮತ್ತಿತರ ಬಗ್ಗೆ ವಿಶೇಷ ಗಮನ ಹರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಕ್ರೀಡಾ ವಸತಿ ಶಾಲೆ ಸೇರಿದಂತೆ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಎಸ್‍ಎಸ್‍ಎಲ್‍ಸಿ ಫಲಿಂತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆಯಲ್ಲಿ ಪಾಠ ಪ್ರವಚನ ಮಾಡಬೇಕು ಎಂದು ಸಲಹೆ ಮಾಡಿದರು.

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹನಿ ನೀರಾವರಿ ಉಪಕರಣಗಳನ್ನು ವಿತರಣೆ ಮಾಡಬೇಕು. ಬೇಸಿಗೆಯಲ್ಲಿ ಕಡಿಮೆ ನೀರನ್ನು ಬಳಸಿ ತರಕಾರಿ ಬೆಳೆಯಲು ಉತ್ತೇಜನ ನೀಡಬೇಕು ಎಂದು ಸಲಹೆ ಮಾಡಿದರು.

ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಜಿ.ಪಂ. ಅನುದಾನವನ್ನು ಸಮನಾಗಿ ಹಂಚಿಕೆ ಮಾಡಬೇಕು. ಇದರಿಂದ ಕೊಡಗು ಸಮಗ್ರ ಅಭಿವೃದ್ಧಿ ಕಾಣಬಹುದು ಎಂದು ಹೇಳಿದರು. ಮುರಳಿ ಕರುಂಬಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 24 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಸಮರ್ಪಕವಾಗಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆಯೇ ಎಂಬದರ ಬಗ್ಗೆ ಗಮನ ಹರಿಸಬೇಕಿದೆ ಎಂದು ಹೇಳಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಅವರು ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕಾವೇರಿ ಹೊಳೆಯಲ್ಲಿ ನೀರು ಕಡಿಮೆಯಾಗುತ್ತಿದೆ. ಹೆಬ್ಬಾಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸಲಹೆ ಮಾಡಿದರು.

ನೆಲ್ಲಿಹುದಿಕೇರಿ, ಬೇಸೂರು, ಕೆದಮುಳ್ಳೂರು, ಕರಿಕೆ ಮತ್ತಿತರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಆಯಾಯ ಕ್ಷೇತ್ರದ ಜಿ.ಪಂ.ಸದಸ್ಯರು ಗಮನ ಸೆಳೆದರು. ಹೊಸಮನೆ ಕವಿತಾ ಪ್ರಭಾಕರ್ ಮಾತನಾಡಿ, ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕವಾಗಿಲ್ಲ, ವೋಲ್ಟೆಜ್ ಸಮಸ್ಯೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಈ ಕುರಿತು ಮಾಹಿತಿ ನೀಡಿದ ಸೆಸ್ಕ್ ಇಂಜಿನಿಯರ್ ಸೋಮಶೇಖರ್ ಅವರು 6 ತಿಂಗಳಲ್ಲಿ ಹೊಸ ವಿದ್ಯುತ್ ಸ್ಟೇಷನ್ ಆರಂಭವಾಗುತ್ತಿದ್ದು, ವೋಲ್ಟೆಜ್ ಸಮಸ್ಯೆ ನಿವಾರಣೆ ಆಗಲಿದೆ ಎಂದು ತಿಳಿಸಿದರು. ತಿತಿಮತಿ ವ್ಯಾಪ್ತಿಯ ಹಾಡಿಗಳು ಇನ್ನೂ ವಿದ್ಯುತ್ ಸಂಪರ್ಕ ಕಂಡಿಲ್ಲ. ಕೆಲವು ಕಡೆ ಸೋಲಾರ್ ಅಳವಡಿಸಲಾಗಿದೆ. ಆದರೆ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ ಎಂದು ಪಂಕಜ ಸಭೆಯ ಗಮನಕ್ಕೆ ತಂದರು.

ಸದಸ್ಯೆ ಎಂ.ಬಿ. ಸುನೀತಾ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಸತಿ ಯೋಜನೆಗಳು ಕುಂಠಿತಗೊಂಡಿದ್ದು, ಇವುಗಳಿಗೆ ಅನುಮೋದನೆ ಆಗಿಲ್ಲ ಎಂದು ಸಭೆ ಗಮನಕ್ಕೆ ತಂದರು.

ನೆಲ್ಲಿಹುದಿಕೇರಿ ಹೊಳೆ ಬದಿಯಲ್ಲಿ ಕಸ ಹಾಕುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಗಮನಸೆಳೆದರು. ಸದಸ್ಯೆ ಭವ್ಯ ವಿವಿಧ ಗ್ರಾ.ಪಂ.ಗಳಲ್ಲಿ ಗ್ರಾಮ ಸಭೆಯನ್ನು ಕಾಲಮಿತಿಯೊಳಗೆ ನಡೆಸುತ್ತಿಲ್ಲ. ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕಿದೆ ಎಂದು ಸಲಹೆ ನೀಡಿದರು.

ಪಂಕಜ ಮಾತನಾಡಿ, ವಿವಿಧ ಗ್ರಾ.ಪಂ.ಗಳಲ್ಲಿ ಶೇ. 24 ರಷ್ಟು ಪರಿಶಿಷ್ಟರಿಗೆ ಸಹಾಯ ಧನ ಕಲ್ಪಿಸಬೇಕಿದೆ. ಆದರೆ ವಿವಿಧ ಗ್ರಾ.ಪಂ.ಗಳಲ್ಲಿ ಅನುದಾನ ಬಳಕೆ ಮಾಡುತ್ತಿಲ್ಲ ಎಂದು ಗಮನ ಸೆಳೆದರು.

ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಈ ಸಂಬಂಧ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗುವದು ಎಂದರು.