ಮಡಿಕೇರಿ, ಫೆ.1: ಕಳೆದ ಜ. 26ರಂದು ನಡೆದ ಗಣರಾಜ್ಯೋತ್ಸವ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಮಡಿಕೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಎನ್‍ಸಿಸಿ ಕೆಡೆಟ್‍ಗಳಾಗಿ ಸಾಧನೆ ತೋರಿದ ಎ.ಜಿ. ಐಶ್ವರ್ಯ, ನಿಶಾಂತ್ ರೈ, ಅಜಿತ್ ಬಿದ್ದಪ್ಪ, ವಿಕಾಸ್, ಚೋಂದಮ್ಮ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಭವ್ಯ, ದರ್ಶಿನಿ, ಬಬಿತ, ಐಶ್ವರ್ಯ, ಅಶ್ವಿನಿ, ದಿಲನ್ ತಿಮ್ಮಯ್ಯ, ಧೀರಜ್ ಕಾರ್ಯಪ್ಪ, ಮೋಹನ್, ಯಶ್‍ವಂತ್, ಪ್ರೀತಿ, ಲಿವಿನ್, ಕೆ.ಟಿ. ನೀತು ಅವರುಗಳನ್ನು ಸನ್ಮಾನಿಸಲಾಯಿತು.

ಸೋಮವಾರಪೇಟೆ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಜೀ ಸೈನಿಕ ಎ.ಕೆ. ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ತಹಶೀಲ್ದಾರ್ ಮಹೇಶ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ ಸೇರಿದಂತೆ ಇತರರು ಉಪಸ್ಥಿತರಿದ್ದು, ಸನ್ಮಾನಿಸಿದರು.

ಗೋಣಿಕೊಪ್ಪ ವರದಿ : ಗಣರಾಜ್ಯೋತ್ಸವದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮುಖ್ಯಮಂತ್ರಿ ಸಾಂತ್ವನ ಯೋಜನೆಯಡಿ ಶರತ್‍ಕಾಂತ್ ಅವರಿಗೆ ಜೀವರಕ್ಷಕ ಪ್ರಶಸ್ತಿ ನೀಡಲಾಯಿತು. ಉಸ್ತುವಾರಿ ಸಚಿವ ಸೀತಾರಾಮ ಅವರು ಪ್ರಶಸ್ತಿ ವಿತರಿಸಿದರು.