ಕುಶಾಲನಗರ, ಫೆ. 1 : ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಸಾಹಿತ್ಯ - ಸಂಸ್ಕøತಿಯ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು; ಕನ್ನಡ ಪುಸ್ತಕ - ಪತ್ರಿಕೆಗಳನ್ನು ಓದಬೇಕು, ದಾರ್ಶನಿಕರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು; ಮೊಬೈಲ್ ಬಿಟ್ಟು ಪುಸ್ತಕ ಕೈಯಲ್ಲಿ ಹಿಡಿಯಬೇಕೆಂಬದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪ್ರಬುದ್ಧವಾದ ವಿಚಾರಧಾರೆಗಳು ಒಂದೆಡೆ ಕೇಳಿಬಂದರೆ, ಮತ್ತೊಂದೆಡೆ ದೇಶ ಕಾಯುವ ಸೈನಿಕ, ಹೆತ್ತ ತಾಯಿ, ಪರಿಸರ, ಅನ್ನದಾತ ರೈತರ ಬಗೆಗಿನ ಕಾಳಜಿಗಳು, ಕವನದ ರೂಪದಲ್ಲಿ ಮೊಳಗಿದವು. ಇನ್ನೊಂದೆಡೆ ಪುಟಾಣಿ ಸಾಧಕರಿಗೆ ಸನ್ಮಾನ..., ಈ ಅಪರೂಪದ, ವಿಶೇಷ, ಚಿತ್ರಣ ಕಂಡು ಬಂದಿದ್ದು ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ..., ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳೇ ಪ್ರಬುದ್ಧರಂತೆ ತಮ್ಮಂತೆಯೇ ಇರುವ ಮಕ್ಕಳಿಗೆ ಹಾಗೂ ಪೋಷಕರಿಗೆ ನೀಡಿದ ಸಂದೇಶಗಳು ನಿಜಕ್ಕೂ ಮೆಚ್ಚುವಂತದ್ದಾಗಿತ್ತು.

ಗೋಷ್ಠಿಯಲ್ಲಿ ನನ್ನ ಭಾಷೆ ನನ್ನ ಕನ್ನಡ ವಿಷಯದ ಬಗ್ಗೆ ವಿದ್ಯಾರ್ಥಿ ಋತ್ವಿಕಾ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಂದರ್ಭ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಕನ್ನಡ ಭಾಷೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು. ಪತ್ರಿಕೆಗಳನ್ನು ಓದಬೇಕು, ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಮ್ಮೇಳನದ ವಿಚಾರ ತಿಳಿದು ಅರ್ಜಿ ಹಾಕಿದ್ದರಿಂದ ನನಗೆ ಇಲ್ಲಿ ಮಾತನಾಡಲು ಅವಕಾಶ ಸಿಕ್ಕಿದೆ ಎಂದು ಪತ್ರಿಕೆಗಳಿಂದಾಗುವ ಉಪಯೋಗವನ್ನು ತಿಳಿಸಿದರು.

ಮಕ್ಕಳ ಮನಸ್ಸುಗಳಲ್ಲಿ ಸಾಹಿತ್ಯ ಪಾತ್ರ ವಿಷಯ ಮಂಡಿಸಿದ ಶೈಮ ಫಾತಿಮ, ಮಕ್ಕಳು ಮೊಬೈಲ್ ಬದಲು ಉತ್ತಮ ಪುಸ್ತಕಗಳ ಖರೀದಿಯತ್ತ ಮನಸ್ಸು ಮಾಡಬೇಕು. ಈ ಮೂಲಕ ಸಾಹಿತ್ಯಾಭಿರುಚಿ ಅಧಿಕಗೊಳ್ಳುತ್ತದೆ ಎಂದರು.

ಶಿಕ್ಷಣ ಮಾಧ್ಯಮಗಳಲ್ಲಿ ಸಾಹಿತ್ಯದ ಪಾತ್ರ ವಿಷಯ ಕುರಿತು ಬಿ.ಡಿ.ನಿತೀಶ್ ಮಾತನಾಡಿ, ಕನ್ನಡ ಸಾಹಿತ್ಯ ಭಾಷಾ ಭಂಡಾರವಾಗಿದ್ದು, ಅದರ ನಿರಂತರ ಬಳಕೆಯಾಗಬೇಕೆಂದರು.

ಮಕ್ಕಳ ಸಾಹಿತ್ಯ ಆಧುನಿಕತೆಯ ಸವಾಲುಗಳ ಬಗ್ಗೆ ಶ್ರೇಯಸ್ ವಿಷಯ ಮಂಡಿಸಿ, ಆಧುನಿತ ತಂತ್ರಜ್ಞಾನಗಳ ಪ್ರಭಾವದಿಂದ ಓದುವ ಹವ್ಯಾಸ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.

ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಆಶಯ ನುಡಿಗಳೊಂದಿಗೆ ಮಕ್ಕಳಿಗೆ ಹಿತವಚನಗಳನ್ನು ಬೋಧಿಸಿದರು. ಮಕ್ಕಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಶಿಸ್ತು ಮುಖ್ಯವೆಂದ ಅವರು, ಏನೇ ಓದಿದರೂ, ಯಾವದೇ ಭಾಷೆ ಕಲಿತರೂ ಕನ್ನಡದಲ್ಲಿ ಮಾತನಾಡು ವಾಗ ಸಿಗುವ ಆನಂದ, ಸಾಧನೆಯ ತೃಪ್ತಿ ಬೇರೆ ಭಾಷೆಯಲ್ಲಿ ಸಿಗುವದಿಲ್ಲ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಬಗ್ಗೆ ಅಭಿಮಾನದೊಂದಿಗೆ ಪರಿಷತ್ತು ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿಭೆ ತೋರ್ಪಡಿಸಬೇಕೆಂದರು.

ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಭಾಗ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮತ್ತಿತರರು ಇದ್ದರು.

ಗೀತಗಾಯನ : ಕಾರ್ಯಕ್ರಮದ ಗೀತಗಾಯನದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ತನ್ವಿತಾ ಶೆಟ್ಟಿ ಸಂಗೀತಕ್ಕೆ ಸಂಸ್ಕಾರದ ತಳಹದಿಯಿದೆ ಎಂದರು. ಹೆಚ್.ಜಿ. ಸಾಧನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೋಮವಾರಪೇಟೆ ಗಾಯಕ ರಾದ ತರುಣ್, ತಾನ್ಯ, ಅಮೂಲ್ಯ, ವೈ.ಎಚ್.ಅಂಕಿತ, ಸುದನ್ವ, ಶರತ್‍ಕುಮಾರ್, ಎಸ್.ಜಿ. ಮೊಸಿನ, ಶುಭಶ್ರೀ, ಚಂದನ್ ನೆಲ್ಲಿತ್ತಾಯ, ಕುಡೆಕಲ್ ನಿಹಾಲ್ ಕನ್ನಡ ಗೀತೆಗಳನ್ನು ಹಾಡಿದರು.

ಕವಿಗೋಷ್ಠಿ : ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕವಿ ಕಾಜೂರು ಸತೀಶ್ ಮಕ್ಕಳು ಓದಿನೊಂದಿಗೆ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಒಂದು ಗಂಟೆಗಳ ಕಾಲ ಟಿವಿ, ಮೊಬೈಲ್ ಎಲ್ಲವನ್ನು ಬಿಟ್ಟು ಏಕಾಂತದಲ್ಲಿದ್ದರೆ ಅದು ನಮ್ಮನ್ನು ಭಾವನಾಲೋಕಕ್ಕೆ ಕರೆದೊಯ್ಯುತ್ತದೆ. ನಮ್ಮಲ್ಲಿ ಹೊಸ ಚಿಂತನೆಗಳು ಸೃಷ್ಟಿಯಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ನಮ್ಮ ತಪ್ಪನ್ನು ನಾವು ತಿದ್ದಿಕೊಳ್ಳಲು ಅವಕಾಶವಾಗಲಿದೆ ಎಂದರು. ಮಕ್ಕಳು ತಿಂಡಿ ಕೇಳುವ ಬದಲು ಪುಸ್ತಕ ಕೇಳಿ ಪಡೆಯಿರೆಂದು ಕಿವಿಮಾತು ಹೇಳಿದರು.

ಬಾಲಕವಿಗಳಾದ ಯಾಶಿಕಾ ಎಂ.ಎನ್., ದಶಮಿ, ಪ್ರಿಯಾಂಕ ದಶರಥ, ಜೀವಿಕಾ, ವಿಕಾಸ್, ರಕ್ಷಿತಾ, ಮುಲ್ಲೇಂಗಡ ದರ್ಶನ್ ಸುಬ್ಬಯ್ಯ, ಮಮತ ದೇಚಕ್ಕ, ವಿಶಾಂಕ್, ಚೆರಿಯಮನೆ ಪ್ರೀತಂ, ಚೆರಿಯಮನೆ ಪ್ರಿಯಾಂಕ, ಕುಶನ್, ಅಜಿತ್, ಡಿಂಪನ, ರಮ್ಯ, ಹಸ್ತವಿಗೌಡ, ಮಧುಶ್ರೀ ಅವರುಗಳು ತಮ್ಮ ಭಾವನಾ ಲಹರಿಗಳನ್ನು ಕಾವ್ಯದ ರೂಪದಲ್ಲಿ ಪ್ರಸ್ತುತಪಡಿಸಿ ಜನಮೆಚ್ಚುಗೆ ಪಡೆದರು.

ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ನಿರ್ದೇಶಕ ಕಿಗ್ಗಾಲು ಗಿರೀಶ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಎಸ್.ಎ. ಮುರಳೀಧರ್, ನಿರ್ದೇಶಕರಾದ ಶ್ರೀಧರ್ ನೆಲ್ಲಿತ್ತಾಯ, ಬಾಲಕೃಷ್ಣರೈ ಇದ್ದರು.

ಸಾಧಕರಿಗೆ ಸನ್ಮಾನ

ಸಮ್ಮೇಳನದ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಜೆ ನಡೆಯಿತು.

ಸಮ್ಮೇಳನಾಧ್ಯಕ್ಷೆ ಕು. ವಿ.ಡಿ. ಸಿಂಚನಾ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಆಶಯ ನುಡಿಗಳಾಡಿದರು. ಮುಖ್ಯ ಭಾಷಣಕಾರರಾಗಿ ವಿದ್ಯಾರ್ಥಿನಿ ಎ.ಜೆ.ಮೌನ ಪಾಲ್ಗೊಂಡಿದ್ದರು.

ಈ ಸಂದರ್ಭ ಬಾಲಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸ ಲಾಯಿತು. ಇದೇ ಸಂದರ್ಭ ಸಮ್ಮೇಳನಾಧ್ಯಕ್ಷೆ ಸಿಂಚನಾ ಅವರನ್ನು ಕೂಡ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಮೊರಾರ್ಜಿ ಶಾಲೆ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಹಾಗೂ ಬೋಧಕ ವರ್ಗದವರು ಶ್ರಮಿಸಿದವರನ್ನು ಗೌರವಿಸಲಾಯಿತು.

ಈ ಸಂದರ್ಭ ಸೋಮವಾರ ಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಹಾಗೂ ಪರಿಷತ್ ಪ್ರಮುಖರು ಇದ್ದರು. ಪರಿಷತ್ ಹಿಂಡ್ರಂಗಿ ನಾಗರಾಜ್ ನಿರೂಪಿಸಿ, ವಂದಿಸಿದರು.